ನವದೆಹಲಿ, ನವೆಂಬರ್ 09: ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳಿಗೆ 96 ರಾಷ್ಟ್ರಗಳು ಒಪ್ಪಿಗೆ ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ಜಗತ್ತು ಕೋವಿಡ್ ವಿರುದ್ಧ ಹೋರಾಡಲು ಭಾರತ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಿದೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಸರ್ಕಾರವು ಉಳಿದ ದೇಶಗಳೊಂದಿಗೂ ಮಾತುಕತೆ ನಡೆಸುತ್ತಿದೆ ಎಂದಿದ್ದಾರೆ. ಭಾರತದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ದೇಶದಲ್ಲಿ ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕೊರತೆಯಿಲ್ಲ. ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಸುಮಾರು 15.77 ಕೋಟಿ ಲಸಿಕೆಗಳಿದ್ದು, ಬಳಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಪ್ರಸ್ತುತ ಸುಮಾರು 96 ರಾಷ್ಟ್ರಗಳು ಭಾರತದಲ್ಲಿ ಉತ್ಪಾದನೆಯಾಗುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ಗೆ ಮಾನ್ಯತೆ ನೀಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ 8 ಕೋವಿಡ್ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಿಗೂ ವಿಶ್ವ ಆರೋಗ್ಯ ಸಂಘಟನೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 96 ರಾಷ್ಟ್ರಗಳು ತಮ್ಮಲ್ಲಿ ಈ ವ್ಯಾಕ್ಸಿನ್ಗಳಿಗೆ ಮಾನ್ಯತೆ ನೀಡಿವೆ.
ಕೆನಡಾ, ಇಂಗ್ಲೆಂಡ್, ಅಮೆರಿಕ, ಜರ್ಮನಿ, ಬೆಲ್ಜಿಯಂ, ಐರ್ಲೆಂಡ್, ಸ್ಪೇನ್, ಬಾಂಗ್ಲಾದೇಶ, ಫಿನ್‌ಲ್ಯಾಂಡ್, ರಷ್ಯಾ, ಆಸ್ಟ್ರಿಯಾ, ಯುಎಇ, ಶ್ರೀಲಂಕಾ, ಪೆರು, ಬ್ರೆಜಿಲ್ ಸೇರಿದಂತೆ ಇತರೆ ದೇಶಗಳು ಅನುಮತಿ ನೀಡಿವೆ.
ವಿದೇಶಗಳಿಗೆ ಪ್ರಯಾಣಿಸಲು ಬಯಸುವವರು ಕೋವಿನ್ ವೆಬ್‌ಸೈಟ್‌ನಲ್ಲಿ ಲಸಿಕೆ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ದೇಶಾದ್ಯಂತ ಕೋವಿಡ್ 19 ಲಸಿಕೆ ಅಭಿಯಾನದ ವೇಗ ಹೆಚ್ಚಿಸುವ ಮತ್ತು ವಿಸ್ತರಿಸುವ ಬದ್ಧತೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರ ಫಲವಾಗಿ 2021ರ ಅಕ್ಟೋಬರ್ 21ರ ವೇಳೆಗೆ 100 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ಪರಸ್ಪರ ಲಸಿಕೆ ಪ್ರಮಾಣಪತ್ರಗಳಿಗೆ ಅನುಮೋದನೆ ಪಡೆಯುವ ಹಾಗೂ ಮುಕ್ತ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆಗೆ ಆರೋಗ್ಯ ಸಚಿವಾಲಯವು ವಿಶ್ವದ ಇತರೆ ದೇಶಗಳೊಂದಿಗೆ ಮಾತುಕತೆ ಮುಂದುವರೆಸಿದೆ ಎಂದಿದ್ದಾರೆ.
ಸದ್ಯ ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಅನುಮತಿಗೆ 96 ದೇಶಗಳು ಒಪ್ಪಿಕೊಂಡಿವೆ. ಕೋವಿಶೀಲ್ಡ್ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ದೇಶದಲ್ಲಿ ಅನುಮೋದನೆ ಪಡೆದ ಯಾವುದೇ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರುವವರು ಪ್ರಯಾಣಿಸಲು ಅನುಮತಿ ನೀಡಲಿವೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಪುಣೆಯಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆಗೂಡಿ ಅಭಿವೃದ್ಧಿಪಡಿಸಿದೆ. ಇನ್ನು ತಜ್ಞರು ಹೇಳುವ ಅನ್ವಯ ಶ್ವೇತ ಭವನದ ಮೆಡಿಕಲ್ ಸಲಹೆಗಾರ ಆಂಟನಿ ಫೌಸಿ ಖುದ್ದು ಒಂದು ಸುದ್ದಿಗೋಷ್ಠಿಯಲ್ಲಿ ಕೋವ್ಯಾಕ್ಸಿನ್ ಲಸಿಕೆ B.1.617 ವೇರಿಯೆಂಟ್ ಅಂದರೆ ಭಾರತದ ಡಬಲ್ ಮ್ಯೂಟೆಂಟ್ ವೇರಿಯೆಂಟ್‌ನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದರು.
ಕೋವಿಶೀಲ್ಡ್ ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆ. ಇದರಲ್ಲಿ ಚಿಂಪಾಂಜಿಗೆ ಸೋಂಕಿಗೀಡು ಮಾಡುವ ತಳೀಯವಾಗಿ ಮಾರ್ಪಡಿಸಿದ ವೈರಸ್‌ಗಳನ್ನು ಒಳಗೊಂಡಿದೆ. ಈ ಮೂಲಕ ಇದು ಮನುಷ್ಯರಿಗೆ ಹರಡದಂತೆ ನೋಡಿಕೊಳ್ಳುತ್ತದೆ.
ಈ ಸಂಶೋಧಿತ ವೈರಸ್‌ನ ಒಂದು ಭಾಗ ಕೊರೋನಾ ವೈರಸ್ ಕೂಡಾ ಆಗಿದ್ದು, ಇದನ್ನು ಸ್ಪೈಕ್ ಪ್ರೊಟೀನ್ ಎನ್ನಲಾಗುತ್ತದೆ. ಈ ಲಸಿಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಸ್ಪೈಕ್ ಪ್ರೊಟೀನ್ ವಿರುದ್ಧ ಹೋರಾಡುತ್ತದೆ. ಈ ಲಸಿಕೆ ವೈರಸ್ ಅನ್ನು ಗುರುತಿಸಲು ಸಹಾಯ ಮಾಡುವ ಪ್ರತಿಕಾಯಗಳು ಮತ್ತು ಮೆಮೊರಿ ಕೋಶಗಳನ್ನು ಉತ್ಪಾದಿಸುತ್ತದೆ..
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಬಹಳ ಪರಿಣಾಮಕಾರಿ ಎನ್ನಲಾಗಿದೆ. ಇವೆರಡೂ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಲ್ಲಿ ಪಾಸ್ ಆಗಿವೆ. ಕೋವ್ಯಾಕ್ಸಿನ್ ತನ್ನ ಬಹುದೊಡ್ಡ ಪ್ರಯೋಗವನ್ನು ಈ ವರ್ಷದ ಫೆಬ್ರವರಿಯಲ್ಲಿ ಪೂರ್ಣಗೊಳಿಸಿತ್ತು.
ಕ್ಲಿನಿಕಲ್ ಸ್ಟಡೀಸ್ ಅನ್ವಯ ಭಾರತ್ ಬಯೋಟೆಕ್‌ನ ಈ ಲಸಿಕೆಯ ದಕ್ಷತೆ ದರ ಶೇ. 78ರಷ್ಟಾಗಿದೆ. ಅಧ್ಯಯನದ ಅನ್ವಯ ಕೋವ್ಯಾಕ್ಸಿನ್ ಅಪಾಯಕಾರಿ ಸೋಂಕು ಹಾಗೂ ಸಾವಿನ ಅಪಾಯದ ಪ್ರಮಾಣವನ್ನು ಶೇ. 100ರಷ್ಟು ಕಡಿಮೆಗೊಳಿಸುವ ಕ್ಷಮತೆ ಹೊಂದಿದೆ.
ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಸಾಮಾನ್ಯ ಅಡ್ಡಪರಿಣಾಮ ಹೊಂದಿವೆ. ಲಸಿಕೆ ನೀಡಿದಲ್ಲಿ ನೋವು, ಜ್ವರ, ಚಳಿಯಾದ ಅನುಭವ, ನಡುಕ, ತಲೆ ತಿರುಗುವುದು, ತಲೆನೋವು, ಹೊಟ್ಟೆನೋವು ಈ ಮೊದಲಾದ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಆದರೆ ಈವರೆಗೂ ಈ ಲಸಿಕೆ ಪಡೆದವರಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.