ಸುಲ್ತಾನ್ ಪುರ: ಪ್ರಧಾನಿ ನರೇಂದ್ರ ಮೋದಿ ನ.16 ರಂದು ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ನ್ನು ಉದ್ಘಾಟಿಸಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ವಿಪಕ್ಷಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಜ್ಯದ ಪ್ರಮುಖ ಪೂರ್ವ ಭಾಗವನ್ನು ಮಾಫಿಯಾವಾಡ್ ಹಾಗೂ ಬಡತನಕ್ಕೆ ಇಳಿಕೆ ಮಾಡಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಐಎಎಫ್ ಸಿ-130 ಹರ್ಕ್ಯುಲಸ್ ವಿಮಾನದಲ್ಲಿ ಹೆದ್ದಾರಿ ಏರ್ ಸ್ಟ್ರಿಪ್ ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದರು. ಈ ಬಳಿಕ ಮೋದಿ 341 ಕಿ.ಮೀ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ನ್ನು ಉದ್ಘಾಟಿಸಿದ್ದಾರೆ.
ಉದ್ಘಾಟನೆ ಬಳಿಕ ಸುಲ್ತಾನ್ ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈ ಹಿಂದಿನ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿ ಎನ್ನುವುದು ಅವರ ಮನೆ, ಆಸ್ತಿಗಳಿರುವ ಪ್ರದೇಶಗಳಿಗೆ ಸೀಮಿತವಾಗಿತ್ತು. ಆದರೆ ಈಗಿನ ಆಡಳಿತದಲ್ಲಿ ಪಶ್ಚಿಮ ಉತ್ತರ ಪ್ರದೇಶಕ್ಕೆ ಸಿಗುತ್ತಿದ್ದ ಅಭಿವೃದ್ಧಿಯ ಫಲಗಳು ಪೂರ್ವ ಉತ್ತರ ಪ್ರದೇಶಕ್ಕೂ ಸಿಗುತ್ತಿದೆ ಎಂದು ಹೇಳಿದ್ದಾರೆ.
ಷಟ್ಪಥ ಎಕ್ಸ್ ಪ್ರೆಸ್ ವೇ ಪೂರ್ವ ಉತ್ತರ ಪ್ರದೇಶ ಭಾಗಕ್ಕೆ ಜೀವನಾಡಿಯಾಗಿ ಕಾರ್ಯನಿರ್ವಹಣೆ ಮಾಡಲಿದ್ದು ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. 3.2 ಕಿ.ಮೀ ಏರ್ ಸ್ಟ್ರಿಪ್ ನ್ನು ಫೈಟರ್ ಯುದ್ಧ ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಲಾಗಿದೆ.
341 ಕಿ.ಮೀ ಎಕ್ಸ್ ಪ್ರೆಸ್ ವೇ ರಾಜ್ಯ ರಾಜಧಾನಿ ಲಖನೌ ನ್ನು ಘಾಜಿಪುರರೊಂದಿಗೆ ಸಂಪರ್ಕಿಸುತ್ತದೆ. 22.500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.