ಕಾಸರಗೋಡು: ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿತಗೊಳಿಸಿದ್ದರೂ, ಕೇರಳದಲ್ಲಿ ತೆರಿಗೆ ಇಳಿಸದೆ ಜನರನ್ನು ವಂಚಿಸುತ್ತಿರುವ ಎಡಡರಂಗ ಧೋರಣೆ ಖಂಡಿಸಿ ಯುವಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಯುವಮೋರ್ಚಾ ರಾಜ್ಯವ್ಯಾಪಕವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಪ್ರತಿಭಟನೆ ನಡೆಯಿತು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ಧರಣಿ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ದರ ಕಡಿತ ಮಾಡಿದರೂ, ಆನುಪಾತಿಕವಾಗಿ ತೆರಿಗೆ ಇಳಿಸಬೇಕಾದ ಕೇರಳ ಸರ್ಕಾರ ರಾಜ್ಯದ ಜನತೆಗೆ ವಂಚನೆಯೆಸಗಿರುವುದಾಗಿ ದೂರಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್. ಸತೀಶ್, ಕಾಸರಗೋಡು ಮಂಡಲ ಸಮಿತಿ ಕಾರ್ಯದರ್ಶಿ ಪಿ.ಆರ್ ಸುನಿಲ್, ರಾಜ್ಯ ಸಮಿತಿ ಸದಸ್ಯ ಪಿ.ರಮೇಶ್, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾಗೋಪಾಲನ್ ಉಪಸ್ಥೀತರಿದ್ದರು.
ಯುವಮೋರ್ಚಾ ಉಪಾಧ್ಯಕ್ಷೆ ಅಂಜು ಜೋಸ್ಟಿ, ಪದಾಧಿಕಾರಿಗಳಾದ ಚಂದ್ರಕಾಂತ ಶೆಟ್ಟಿ, ಪ್ರದೀಪ್ ಕುಂಬಳೆ, ಸಬಿನೇಶ್, ರಾಹುಲ್ ಪರಪ್ಪ, ಮಹೇಶ್ ಗೋಪಾಲನ್ ನೇತೃತ್ವ ನೀಡಿದರು. ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಾಗರ್ ಚಾತಮತ್ ಸ್ವಾಗತಿಸಿದರು. ಅಜಿತ್ ಕಡಪ್ಪುರಂ ವಂದಿಸಿದರು. ಪ್ರತಿಭಟನಾನಿರತರ ಮೇಲೆ ಜಲಫಿರಂಗಿ ಪ್ರಯೋಗಿಸುವ ಮೂಲಕ ಪೊಲೀಸರು ಪ್ರತಿಭಟನೆ ತಡೆಯಲು ಯತ್ನಿಸಿದರು.