ಪಾಲಕ್ಕಾಡ್: ಪಾಲಕ್ಕಾಡ್‍ನಲ್ಲಿ ಆರ್.ಎಸ್.ಎಸ್. ಮಂಡಲ ಪ್ರಮುಖನ ಹತ್ಯೆಯನ್ನು ಕಣ್ಣಾರೆ ಕಂಡ ವೃದ್ಧರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಾರುತ ರಸ್ತೆಯ ನಿವಾಸಿ ರಾಮು ಮೃತರಾದವರು. ವರದಿಗಳ ಪ್ರಕಾರ ರಾಮು ಕೊಲೆ ಕೃತ್ಯದ ವೇಳೆ ಪ್ರತ್ಯಕ್ಷದರ್ಶಿಯಾಗಿದ್ದರು. ಕೊಲೆಗೆ ಇತರ ಸಾಕ್ಷಿಗಳೂ ಇದ್ದಾರೆ ಎಂದು ಪೋಲೀಸರು ಹೇಳಿದ್ದಾರೆ.
ಪೋಲೀಸರ ಹೇಳಿಕೆಯಂತೆ ರಾಮು ಸೇರಿದಂತೆ ಮೂವರು ಕೊಲೆಗೆ ಸಾಕ್ಷಿಗಳಾಗಿದ್ದರು. ಹಂತಕರು ಕಾರಿನಿಂದ ಇಳಿದು ಸಂಜಿತ್ ನನ್ನು ಕತ್ತಿಯಿಂದ ಕಡಿದು ಹಾಕುವುದನ್ನು ರಾಮು ನೋಡಿದ್ದರು ಎಂದು ಇತರ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ರಾಮು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಸಂಜಿತ್ ಅವರ ವಾಹನದ ಪಕ್ಕದಲ್ಲಿ ಬಂದ ವೈದ್ಯರೊಬ್ಬರು ಕೂಡ ಕೊಲೆಗೆ ಸಾಕ್ಷಿಯಾಗಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿ. ಮತ್ತೊಬ್ಬ ಶಾಲಾ ವ್ಯಾನ್ ಚಾಲಕ ಕೂಡ ಘಟನೆಗೆ ಸಾಕ್ಷಿಯಾಗಿದ್ದಾನೆ. ಅವರ ಹೇಳಿಕೆಗಳನ್ನೂ ಪೋಲೀಸರು ಸಂಗ್ರಹಿಸುತ್ತಿದ್ದಾರೆ.ಹತ್ಯೆಗೆ ಸಂಜಿತ್ ಪತ್ನಿಯೂ ಸಾಕ್ಷಿಯಾಗಿದ್ದಾರೆ. ಅವರ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿಯ ಹೇಳಿಕೆಯನ್ನು ತೆಗೆದುಕೊಂಡಿಲ್ಲ ಎಂದು ಪೆÇಲೀಸರು ತಿಳಿಸಿದ್ದಾರೆ.
ಆ ಪ್ರದೇಶದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಪಾಲಕ್ಕಾಡ್ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ. ಎಂಟು ತಂಡಗಳು ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸುತ್ತಿವೆ ಎಂದು ಪೋಲೀಸರು ತಿಳಿಸಿದ್ದಾರೆ. ಸಾಕ್ಷಿಗಳ ಪ್ರಕಾರ ಹಂತಕರು ಚಲಾಯಿಸುತ್ತಿದ್ದ ಕಾರು ಪಾಲಕ್ಕಾಡ್ ಹೆದ್ದಾರಿಯತ್ತ ಸಾಗಿ ಮರೆಯಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ ಎಂದು ಪಾಲಕ್ಕಾಡ್ ಎಸ್ಪಿ ಆರ್ ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಬಹುದು ಎಂದು ಎಸ್ಪಿ ತಿಳಿಸಿದ್ದಾರೆ.
ಪಾಲಕ್ಕಾಡ್ ಮಂಬರಂನಲ್ಲಿ ಇಂದು ಬೆಳಿಗ್ಗೆ ಕೊಲೆ ನಡೆದಿತ್ತು. ಸಂಜಿತ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಪತ್ನಿಯ ಎದುರೇ ಕೊಚ್ಚಿ ಕೊಲೆ ಮಾಡಲಾಗಿದೆ. ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಗುಂಪು ಬೈಕ್ ನ್ನು ತಡೆದು ಕಡಿಯಿತು. ಈ ಹತ್ಯೆಯ ಹಿಂದೆ ಎಸ್‍ಡಿಪಿಐ ಉಗ್ರರ ಕೈವಾಡವಿದೆ ಎಂದು ಸಂಘಪರಿವಾರದ ಸಂಘಟನೆಗಳು ಆರೋಪಿಸಿವೆ.