ಲಂಡನ್: ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ಬ್ರಿಟನ್ ಸರ್ಕಾರ ವಿಶೇಷ ನಾಣ್ಯ ಬಿಡುಗಡೆ ಮಾಡಿದ್ದು, ಭಾರತ ಮೂಲದ ಬ್ರಿಟನ್ ಸಚಿವ ರಿಷಿ ಸುನಕ್ ಅವರು ನಾಣ್ಯ ಪ್ರದರ್ಶಿಸಿದ್ದಾರೆ.
ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್‌ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಗುರುವಾರ ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಅನಾವರಣಗೊಳಿಸಿದರು.
ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಮಾನದಂಡಗಳಲ್ಲಿ ಈ ನಾಣ್ಯ ಲಭ್ಯವಿದೆ. ಸಂಗ್ರಹ ಯೋಗ್ಯವಾದ ಈ ನಾಣ್ಯವನ್ನು ಹೀನಾ ಗ್ಲೋವರ್ ವಿನ್ಯಾಸಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಹಾತ್ಮ ಗಾಂಧಿಯವರ ಅತ್ಯಂತ ಪ್ರಸಿದ್ಧ ಉಲ್ಲೇಖಗಳಲ್ಲಿ ಒಂದಾದ ‘ಮೈ ಲೈಫ್ ಈಸ್ ಮೈ ಮೆಸೇಜ್’ ಜೊತೆಗೆ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನುಈ ವಿಶೇಷ ನಾಣ್ಯ ಒಳಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಿಷಿ ಸುನಕ್ ಅವರು, 'ಈ ನಾಣ್ಯವು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಪ್ರಭಾವಿ ನಾಯಕನಿಗೆ ಸೂಕ್ತವಾದ ಗೌರವವಾಗಿದೆ' ಎಂದು ಹೇಳಿದರು.