ನವದೆಹಲಿ: ಅಫ್ಘಾನಿಸ್ತಾನ ಜಾಗತಿಕ ಭಯೋತ್ಪಾದನೆಗೆ ಸ್ವರ್ಗದಂತಾಗಲು ಅವಕಾಶ ನೀಡದಂತೆ ಕೆಲಸ ಮಾಡುವುದಕ್ಕೆ ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯಪ್ರಾಚ್ಯದ ಐದು ರಾಷ್ಟ್ರಗಳು ದೆಹಲಿಯಲ್ಲಿ ನಡೆದ ಸಂವಾದದಲ್ಲಿ ನಿರ್ಧರಿಸಿವೆ.
ಅಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಆಯೋಜಿಸಿದ್ದ ಈ ಸಂವಾದದಲ್ಲಿ ಮುಕ್ತ ಹಾಗೂ ನೈಜ ದೃಷ್ಟಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ಅಲ್ಲಿ ರಚನೆಯಾಗಬೇಕೆಂಬ ಕರೆಯನ್ನು ನೀಡಲಾಗಿದೆ.
ಅಫ್ಘಾನ್ ನೆಲವನ್ನು ಭಯೋತ್ಪಾದನೆಗೆ ನೆಲೆ, ತರಬೇತಿಯ ಕೇಂದ್ರ ಹಾಗೂ ಉಗ್ರ ಚಟುವಟಿಕೆಗಳ ಯೋಜನೆ, ಆರ್ಥಿಕ ಚಟುವಟಿಕೆಗಳಿಗೆ ಬಳಕೆಯಾಗದಂತೆ ಎಚ್ಚರದಿಂದ ಕೆಲಸ ಮಾಡುವ ನಿರ್ಣಯ ಕೈಗೊಂಡಿದ್ದು ಸಂವಾದದ ಪ್ರಮುಖ ಅಂಶವಾಗಿದೆ.
ನೆರೆ ರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಸಾಮಾಜಿಕ-ಆರ್ಥಿಕ ಹಾಗೂ ಮಾನವೀಯ ಪರಿಸ್ಥಿತಿಯ ಬಗ್ಗೆ ದೆಹಲಿಯ ಪ್ರಾದೇಶಿಕ ಭದ್ರತಾ ಸಂವಾದಲ್ಲಿ ಆತಂಕ ವ್ಯಕ್ತವಾಗಿದ್ದು ಅಫ್ಘಾನ್ ಜನತೆಗೆ ಮಾನವೀಯ ನೆಲೆಯಲ್ಲಿ ತುರ್ತು ನೆರವು ನೀಡುವ ಅಗತ್ಯವನ್ನು ಸಂವಾದದಲ್ಲಿ ಭಾಗಿಯಾಗಿದ್ದ ದೇಶಗಳು ಮನಗಂಡಿವೆ.
ತಡೆರಹಿತ, ನೇರವಾದ, ಖಚಿತವಾದ ರೀತಿಯಲ್ಲಿ ಮಾನವೀಯ ನೆರವನ್ನು ಅಫ್ಘಾನ್ ಗೆ ನೀಡಬೇಕು ಎಂಬುದನ್ನು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಸಂವಾದದಲ್ಲಿ ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳು ಭಾಗಿಯಾಗಿದ್ದವು.
ಪ್ರಾರಂಭಿಕ ಭಾಷಣದಲ್ಲಿ ಎನ್ ಎಸ್ಎ ಅಜಿತ್ ದೋವಲ್ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಅಲ್ಲಿನ ಜನತೆಗೆ ಅಷ್ಟೇ ಅಲ್ಲದೇ ಪ್ರಾದೇಶಿಕವಾಗಿಯೂ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದೇ ಅಲ್ಲಿನ ಸಾರ್ವಭೌಮತ್ವ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ ಶಾಂತಿಯುತ, ಸುಭದ್ರ, ಸ್ಥಿರ ಅಫ್ಘಾನಿಸ್ತಾನಕ್ಕೆ ಬೆಂಬಲಿಸಲು ಅಧಿಕಾರಿಗಳು ಈ ಸಭೆಯಲ್ಲಿ ನಿರ್ಧರಿಸಿದ್ದಾರೆ.