ಪತ್ತನಂತಿಟ್ಟ: ಶಬರಿಮಲೆ ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಆರೋಗ್ಯ ಭದ್ರತೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅಕ್ಟೋಬರ್ ತಿಂಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಸಿದ್ಧಪಡಿಸುವ ಮೂಲಕ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದಲ್ಲಿ ವಿಶೇಷ ಸಭೆಗಳನ್ನು ಕರೆಯಲಾಗಿದೆ. ಪಂಪಾದಿಂದ ಸನ್ನಿಧಾನದವರೆಗಿನ ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಪಂಪಾ ಮತ್ತು ಸನ್ನಿಧಾನದಲ್ಲಿರುವ ವೈದ್ಯಕೀಯ ಕಾಲೇಜುಗಳ ತಜ್ಞ ವೈದ್ಯರ ಸೇವೆಯನ್ನೂ ಖಾತ್ರಿಪಡಿಸಲಾಗುವುದು. ಸೋಮವಾರದಿಂದ ಆರೋಗ್ಯ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಯಾತ್ರಾರ್ಥಿಗಳು ಮತ್ತು ಸಿಬ್ಬಂದಿಗಳು ಕೊರೋನಾದೊಂದಿಗೆ ಮಳೆಯ ಬಗೆಗೂ ನಿಗಾ ಇರಿಸಲಾಗುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಇರುವವರು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದು ಸಚಿವರು ಹೇಳಿದರು.
ಪಂಪಾದಿಂದ ಸನ್ನಿಧಾನದÀರೆಗಿನ ಪ್ರಯಾಣದ 5 ಸ್ಥಳಗಳಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳು ಮತ್ತು ಆಕ್ಸಿಜನ್ ಪಾರ್ಲರ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಆರೋಹಣ ಮಾಡುವಾಗ ಅತಿಯಾದ ಹೃದಯ ಬಡಿತ, ಉಸಿರಾಟದ ತೊಂದರೆ ಅಥವಾ ಎದೆನೋವಿನಂತಹ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ತಕ್ಷಣ ಹತ್ತಿರದ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು. ದಣಿದ ಯಾತ್ರಾರ್ಥಿಗಳಿಗೆ ವಿಶ್ರಾಂತಿ, ಆಮ್ಲಜನಕದ ಉಸಿರಾಟ, ಪ್ರಥಮ ಚಿಕಿತ್ಸೆ ಮತ್ತು ರಕ್ತದೊತ್ತಡ ತಪಾಸಣೆಯನ್ನು ಒದಗಿಸಲು ಆರೋಗ್ಯ ಕೇಂದ್ರಗಳು ಸಜ್ಜುಗೊಂಡಿವೆ. ಹೃದಯಾಘಾತದಿಂದ ಬಳಲುತ್ತಿರುವ ಯಾತ್ರಾರ್ಥಿಗಳಿಗೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‍ಗಳು ಸೇರಿದಂತೆ ತರಬೇತಿ ಪಡೆದ ಸ್ಟಾಫ್ ನರ್ಸ್‍ಗಳು ದಿನದ 24 ಗಂಟೆಗಳ ಕಾಲ ಈ ಕೇಂದ್ರಗಳಲ್ಲಿ ಲಭ್ಯವಿರುತ್ತಾರೆ ಎಂದು ಸಚಿವರು ಹೇಳಿದರು.
ಸನ್ನಿಧಾನ, ಪಂಪಾ, ನಿಲಕ್ಕಲ್, ಚರಲ್ಮೇಡು (ಅಯ್ಯಪ್ಪನ್ ರಸ್ತೆ) ಮತ್ತು ಎರುಮೇಲಿಯಲ್ಲಿ ವಿಶೇಷ ಔಷಧಾಲಯಗಳನ್ನು ಸ್ಥಾಪಿಸಲಾಗಿದೆ. ಸನ್ನಿಧಾನದಲ್ಲಿ ತುರ್ತು ಆಪರೇಷನ್ ಥಿಯೇಟರ್ ನ್ನು ಔಷಧಗಳು ಮತ್ತು ಸುರಕ್ಷತಾ ಸಾಧನಗಳೊಂದಿಗೆ ಸ್ಥಾಪಿಸಲಾಗುವುದು. ಪಂಪಾ ಮತ್ತು ಸನ್ನಿಧಾನದಲ್ಲಿ ವೆಂಟಿಲೇಟರ್‍ಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಂಚಾರಿ ವೈದ್ಯಕೀಯ ತಂಡವನ್ನೂ ರಚಿಸಲಾಗಿದೆ. ವಿಶೇಷ ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿದೆ.
ಭಾರತದ ಎಲ್ಲಿಂದಲಾದರೂ ಆಗಮಿಸುವ ಕಾಪ್ಸಾ ಕಾರ್ಡ್‍ಗಳನ್ನು ಹೊಂದಿರುವ ಯಾತ್ರಾರ್ಥಿಗಳು ರಾಜ್ಯದ ರಾಜ್ಯ ಆರೋಗ್ಯ ಏಜೆನ್ಸಿಯ ಮೂಲಕ ಎಂಪನೆಲ್ ಮಾಡಲಾದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು. ರಾಜ್ಯದ 555 ಖಾಸಗಿ ಆಸ್ಪತ್ರೆಗಳು ಮತ್ತು 194 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದೆ. ಕಾರ್ಡ್ ಇಲ್ಲದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಹತ್ತಿರದ ಎಂಪನೆಲ್ಡ್ ಆಸ್ಪತ್ರೆಗಳಿಗೆ ನಿರ್ದೇಶನ 1056 ಸಂಖ್ಯೆ ಸಂಪರ್ಕಿಸಬಹುದು ಎಂದು ಸಚಿವರು ಹೇಳಿದರು.
ಆರೋಗ್ಯ ಇಲಾಖೆ ಎಲ್ಲ ಭಾಷೆಗಳಲ್ಲಿ ಜಾಗೃತಿ ಮೂಡಿಸಲಿದೆ. ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಸೂಚಿಸಿದರು. ಇವುಗಳ ಜೊತೆಗೆ ಯಾತ್ರಿಕರು ಗಮನಹರಿಸಬೇಕಾದ ಕೆಲವು ಪ್ರಮುಖ ವಿಷಯಗಳನ್ನು ಬೊಟ್ಟುಮಾಡಿರುವರು.
ಮಳೆಗಾಲದಲ್ಲಿ ಪರ್ವತಾರೋಹಣಕ್ಕೆ ನಿರ್ದಿಷ್ಟ ಗಮನ ನೀಡಬೇಕು.
ಪರ್ವತವನ್ನು ಹತ್ತುವಾಗ 2 ಮೀಟರ್ ದೂರವನ್ನು ಕಾಯ್ದುಕೊಳ್ಳಬೇಕು.
ಬಾಯಿ ಮತ್ತು ಮೂಗನ್ನು ಮುಚ್ಚುವ ಮಾಸ್ಕ್ ಧರಿಸಬೇಕು. ಮಾತನಾಡುವಾಗ ಮಾಸ್ಕ್ ಕೆಳಗೆ ಇಳಿಸಬಾರದು.
ಬಳಸಿದ ಮಾಸ್ಕ್, ತ್ಯಾಜ್ಯ ವಸ್ತುಗಳು ಮತ್ತು ಪ್ಲಾಸ್ಟಿಕ್‍ಗಳನ್ನು ಎಸೆಯಬಾರದು.
ಕೈಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಪ್ರಯಾಣಿಸುವಾಗ ಸ್ಯಾನಿಟೈಸರ್ ಬಗ್ಗೆ ಕಾಳಜಿ ವಹಿಸಬೇಕು.
ಕೊಳಕು ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬಾರದು.
ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಂತಹ ರೋಗಲಕ್ಷಣಗಳನ್ನು ಹೊಂದಿರುವ ಜನರು ಯಾತ್ರೆಯನ್ನು ತಪ್ಪಿಸಬೇಕು.
3 ತಿಂಗಳೊಳಗೆ ಕೊರೋನಾ ಬಂದವರಿಗೆ, ಪರ್ವತವನ್ನು ಹತ್ತುವುದು ಶ್ವಾಸಕೋಶ ಮತ್ತು ಹೃದಯದ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಯಾತ್ರೆಗೆ ಮುನ್ನ ದೈಹಿಕ ಸದೃಢತೆಯನ್ನು ಖಚಿತಪಡಿಸಿಕೊಳ್ಳಬೇಕು. ಪಲ್ಮನಾಲಜಿ ಮತ್ತು ಕಾರ್ಡಿಯಾಲಜಿ ಪರೀಕ್ಷೆಗಳನ್ನು ಮಾಡಿಸುವುದು ಉತ್ತಮ.
ಅಂಗಡಿಗಳು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಬೇಕು.
ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳಲ್ಲಿ ತಂಗಬಾರದು.
ಶುದ್ಧ ನೀರನ್ನು ಮಾತ್ರ ಸೇವಿಸಬೇಕು. ಯಾತ್ರಾರ್ಥಿಗಳೊಂದಿಗೆ ಬರುವ ಎಲ್ಲಾ ಚಾಲಕರು, ಕ್ಲೀನರ್‍ಗಳು ಮತ್ತು ಅಡುಗೆಯವರು ಆರೋಗ್ಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.