HEALTH TIPS

ಮಣಿದ ಕೇಂದ್ರ: ಮೂರು ಕೃಷಿ ತಿದ್ದುಪಡಿ ಕಾಯ್ದೆಗಳು ವಾಪಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ

        ನವದೆಹಲಿ: ಕೇಂದ್ರ ಸರ್ಕಾರ ಕೊನೆಗೂ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ, ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರವನ್ನು ಮಾಡಿದೆ. 

       ಇಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು. ಈ ತಿಂಗಳ ಅಂತ್ಯದಲ್ಲಿ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು ಅದರಲ್ಲಿಯೇ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. 

      ಇಂದು ಗುರುನಾನಕ್ ಜಯಂತಿಯಂದು ದೇಶವಾಸಿಗಳ ಮುಂದೆ ರೈತ ಮಸೂದೆಗಳನ್ನು ವಾಪಸ್ ಮಾಡುವ ನಿರ್ಧಾರ ಪ್ರಕಟಿಸುತ್ತಿದ್ದೇನೆ, ರೈತರು ಪ್ರತಿಭಟನೆ ಕೈಬಿಟ್ಟು ತಮ್ಮ ಮನೆಗಳಿಗೆ ತೆರಳುವಂತೆ ಪ್ರಧಾನಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಈ ಕೃಷಿ ಕಾನೂನುಗಳನ್ನು ಹಿಂಪಡೆಯಲು ನಾವು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಮೂರು ಕೃಷಿ ಕಾನೂನುಗಳ ಗುರಿ ರೈತರನ್ನು, ವಿಶೇಷವಾಗಿ ಸಣ್ಣ ರೈತರನ್ನು ಸಬಲೀಕರಣಗೊಳಿಸುವುದಾಗಿತ್ತು. ಮೂರು ಕಾನೂನುಗಳು ರೈತರ ಪ್ರಯೋಜನಕ್ಕಾಗಿವೆಯಾದರೂ ಒಂದು ವರ್ಗದ ರೈತರ ಮನವೊಲಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಇಂದು ಘೋಷಣೆ ಮಾಡುವ ಸಂದರ್ಭದಲ್ಲಿ ಪ್ರಧಾನಿ ಹೇಳಿದರು. 

      2014ರಿಂದ ನಮ್ಮ ಸರ್ಕಾರದಲ್ಲಿ ಕೃಷಿ ಬಜೆಟ್ 5 ಪಟ್ಟು ಏರಿಕೆಯಾಗಿದ್ದು, ವಾರ್ಷಿಕ 1.25 ಲಕ್ಷ ಕೋಟಿ ರೂಪಾಯಿಗಳನ್ನು ಕೃಷಿಗೆ, ರೈತರ ಒಳಿತಿಗೆ ಖರ್ಚು ಮಾಡಿದ್ದೇವೆ. ನನ್ನ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ನಾನು ರೈತರ ಕಷ್ಟಗಳು, ಸವಾಲುಗಳನ್ನು ಬಹಳ ಹತ್ತಿರದಿಂದ  ಕಂಡಿದ್ದೇನೆ. ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆ ಕಳೆದ ಸೆಪ್ಟೆಂಬರ್  ತಿಂಗಳಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. 

        ಕೆಲವೇ ತಿಂಗಳುಗಳಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಇಷ್ಟು ಸಮಯಗಳಿಂದ ನಿರಂತರವಾಗಿ ರೈತರ ಮಸೂದೆಗೆ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಈಗ ಕಾಯ್ದೆಯನ್ನು ಹಿಂಪಡೆದಿರುವುದು ರಾಜಕೀಯ ನಡೆ. ಚುನಾವಣೆ ಸಂದರ್ಭದಲ್ಲಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಂತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

       ಮೂರು ತಿದ್ದುಪಡಿಗಳು ಮಸೂದೆಗಳು: ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, 2020,  ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ, 2020; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020ನ್ನು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಆದರೆ ಅದಕ್ಕೆ ಪಂಜಾಬ್, ಹರ್ಯಾಣ ಸೇರಿದಂತೆ ಕೆಲ ಭಾಗಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸಲು ತಿದ್ದುಪಡಿ ಮಸೂದೆ ಅತ್ಯಂತ ಉಪಯೋಗಕಾರಿ ಎಂದು ಕೇಂದ್ರ ಸರ್ಕಾರ ರೈತರ ಮನವೊಲಿಕೆಗೆ ಪ್ರಯತ್ನಿಸುತ್ತಿತ್ತು.

       ರೈತರೊಂದಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ಗೃಹ ಸಚಿವ ಅಮಿತ್ ಶಾ ಮೊದಲಾದವರು 11 ಸುತ್ತಿನ ಔಪಚಾರಿಕ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ರೈತರ ಪ್ರತಿಭಟನೆ, ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಹಲವು ಸೆಲೆಬ್ರಿಟಿಗಳು ರೈತರ ಪರವಹಿಸಿ ಮಾತನಾಡಿದ್ದರು. 
ಕಳೆದ ಜನವರಿ 26ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಯದಲ್ಲಿ ತೀವ್ರ ಹಿಂಸಾಚಾರ, ಪ್ರತಿಭಟನೆ ಕೂಡ ನಡೆದಿತ್ತು.


 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries