ಕಾಸರಗೋಡು: ಜಿಲ್ಲೆಯ ಸೈನಿಕರ ಒಕ್ಕೂಟವಾಗಿರುವ ಸೋಲ್ಜರ್ಸ್ ಆಫ್ ಕೆಎಲ್-14 ವೆಲ್ಫೇರ್ ಸೊಸೈಟಿ ಹಾಗೂ ರಾಜ್ಯದ ಇತರ ಜಿಲ್ಲೆಗಳ ಸೈನಿಕರ ಒಕ್ಕೂಟ ಆಲ್ ಕೇರಳ ಸೋಲ್ಜರ್ಸ್ ಅಸೋಸಿಯೇಶನ್ ಅಡ್ಮಿನಿಸ್ಟ್ರೇಶನ್ ಟೀಂ(ಎಕೆಎಸ್‍ಎಟಿ)ವತಿಯಿಂದ 2008 ನ. 26ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ವೀರ ಮೃತ್ಯು ಪಡೆದ ಯೋಧರ ನೆನಪಿಗಾಗಿ ಜ್ಯೋತಿ ಪ್ರಯಾಣಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ಶುಕ್ರವಾರ ಚಾಲನೆ ನೀಡಲಾಯಿತು.
ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡು ಜೀವನ್ಮರಣದ ಹೋರಾಟದ ನಂತರ ಬದುಕಿ ಉಳಿದ ಎನ್‍ಎಸ್‍ಜಿ ಕಮಾಂಡೋ ಸುಬೇದಾರ್ ಮನೇಶ್ ಪಿ.ವಿ ಶೌರ್ಯಚಕ್ರ ಜ್ಯೋತಿ ಪ್ರಯಾಣ ಉದ್ಘಾಟಿಸಿದರು. ಕಾಸರಗೋಡು ಡಿವೈಎಸ್‍ಪಿ ಬಾಲಕೃಷ್ಣನ್ ನಾಯರ್ ಫ್ಲ್ಯಾಗ್ ಆನ್ ನಡೆಸಿದರು. ಸೈನಿಕರ ಒಕ್ಕೂಟದ ಅಧ್ಯಕ್ಷ ಶಶಿಧರನ್ ಇ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯನ್ ಪಿ. ಸ್ವಾಗತಿಸಿದರು. ಉಪಾಧ್ಯಕ್ಷ, ಸೇನಾಪದಕ ವಿಜೇತ ಪಿ.ವಿ ಬಿನು ವಂದಿಸಿದರು. ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿ ಪೊಲೀಸ್ ಪಾಲ್ಗೊಂಡಿದ್ದರು. ಸೋಲ್ಜರ್ಸ್ ಆಫ್ ಕೆಎಲ್-14 ವೆಲ್ಫೇರ್ ಸೊಸೈಟಿ ಪದಾಧಿಕಾರಿಗಳು ದ್ವಿಚಕ್ರ ವಾಹನಗಳ ಮೂಲಕ ಜ್ಯೋತಿ ಪ್ರಯಾಣದ ಬೆಂಗಾವಲಾಗಿ ಸಂಚರಿಸಿ ಕಾಲಿಕಡವಿನಲ್ಲಿ ಕಣ್ಣೂರು ಜಿಲ್ಲೆಗೆ ಜ್ಯೋತಿ ಪ್ರಯಾಣ ಕಳುಹಿಸಿಕೊಟ್ಟರು. ಜ್ಯೋತಿ ಪ್ರಯಾಣ ನ. 26ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.