ಲಸಿಕೆ ಪಡೆದ ಆರೋಗ್ಯವಂತ ಜನರು ಮೃತಪಡುತ್ತಿರುವ ಕುರಿತು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ಹೇಳಿದೆ.
ಲಸಿಕೆಯ ಗಂಭೀರ ಮತ್ತು ಅಲ್ಪ ಪ್ರಮಾಣದ ಪ್ರತಿಕೂಲ ಪರಿಣಾಮ ಕುರಿತು ನಿಗಾವಹಿಸುವಂತೆ ಪರಿಷ್ಕೃತ 'ರೋಗ ನಿರೋಧಕದ ಪ್ರತಿಕೂಲ ಪರಿಣಾಮ'(ಎಇಎಫ್‌ಐ) ಮಾರ್ಗಸೂಚಿಯಲ್ಲಿ ಹೇಳಲಾಗಿದೆ ಎಂದು ಪೀಠ ಹೇಳಿದೆ.
ಲಸಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ನೂರಾರು ಸಾವುಗಳು ವರದಿಯಾಗಿವೆ ಎಂದು ಅಜಯ್ ಕುಮಾರ್ ಗುಪ್ತ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು. ಲಸಿಕೆ ಪಡೆದ 30 ದಿನಗಳ ಒಳಗೆ ಸಂಭವಿಸುತ್ತಿರುವ ಸಾವುಗಳ ಕುರಿತು ಮಾಹಿತಿ ಕಲೆಹಾಕುವಂತೆ ಮತ್ತು ಈ ಕುರಿತು ಮಾಹಿತಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಹೇಳಿದ್ದರು.
ಲಸಿಕೆಗೆ ಸಂಬಂಧಿಸಿದಂತೆ ದೇಶದಾದ್ಯಂತ ನೂರಾರು ಜನರು ಮೃತಪಟ್ಟಿರುವ ಕುರಿತ ವರದಿಯನ್ನು ಅರ್ಜಿದಾರರ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹಿರಿಯ ವಕೀಲ ಕೋಲಿನ್ ಗ್ಯಾನ್ಸಾಲ್ವೆಸ್ ಕೋರ್ಟ್‌ಗೆ ಸಲ್ಲಿಸಿದರು.
ಅರ್ಜಿ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಕೋರ್ಟ್ ಎರಡು ವಾರಗಳ ನಂತರ ನಿಗದಿಪಡಿಸಿದೆ.