ನವದೆಹಲಿ: ಅತ್ತ ಹರೇಕಳ ಹಾಜಬ್ಬ ಅವರಂಥವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಕೇಂದ್ರ ಸರ್ಕಾರ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಇತ್ತ ಹಾಜಬ್ಬ ಅವರು ಪ್ರಶಸ್ತಿ ಸ್ವೀಕರಿಸಲು ಹೋದ ರೀತಿ, ಪದ್ಮಶ್ರೀಯನ್ನು ಸ್ವೀಕರಿಸಿದ ಪರಿ ಕೂಡ ಭಾರಿ ಮೆಚ್ಚುಗೆಗೆ ಒಳಗಾಗಿದೆ.
ನಿನ್ನೆ ಅವರು ಅಕ್ಷರ ಸಂತ ಮಾತ್ರವಾಗಿರದೆ ಬರಿಗಾಲ ಫಕೀರನಾಗಿಯೂ ಕಂಗೊಳಿಸಿದರು. ಒಂದು ಪಂಚೆ, ಅಂಗಿ, ಅದರ ಮೇಲೊಂದು ಸಾಮಾನ್ಯ ಶಾಲು ಹೊದ್ದುಕೊಂಡು ಚಪ್ಪಲಿ ತೊಡದೆ ಬರಿಗಾಲಿನಲ್ಲೇ ಕೈಮುಗಿದು ಕೊಂಡು ಪ್ರಶಸ್ತಿ ಸ್ವೀಕರಿಸಲು ಅವರು ಹೋದ ದೃಶ್ಯ ಇವತ್ತಿನ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ಅತ್ಯಾಕರ್ಷಕ ಕ್ಷಣ ಎಂದರೂ ಅತಿಶಯೋಕ್ತಿ ಅನಿಸದು.
ಕೈಮುಗಿದುಕೊಂಡೇ ರಾಷ್ಟ್ರಪತಿಯವರನ್ನು ಸಮೀಪಿಸಿದ, ಅತ್ಯಂತ ಮುಗ್ಧತೆಯಿಂದ ಸರಳಾತಿರಳವಾಗಿ ನಿರ್ಲಿಪ್ತ ಎಂಬಂತೆ ಅವರು ಪದ್ಮಶ್ರೀಯನ್ನು ಸ್ವೀಕರಿಸಿದ ಆ ಪರಿಗೆ ರಾಷ್ಟ್ರಪತಿಯವರೇ ಮನಸೋತಿದ್ದು ಗೋಚರಿಸಿದೆ. ಪ್ರಶಸ್ತಿ ಸ್ವೀಕರಿಸಲು ಬರಿಗಾಲಲ್ಲಿ ಹೋದ ಹಾಜಬ್ಬ ಅವರು ಅದನ್ನು ಸ್ವೀಕರಿಸಿ ಮರಳುವಾಗಲೂ ಅವರ ಹೆಜ್ಜೆ ಭಾರಗೊಳ್ಳಲಿಲ್ಲ, ನಡಿಗೆಯಲ್ಲಿ ಹಮ್ಮು-ಬಿಮ್ಮು ಸೇರಿಕೊಂಡಿರಲಿಲ್ಲ. ಅಕ್ಷರ ಸಂತನಾಗಿ, ಬರಿಗಾಲ ಫಕೀರನಾಗಿ ಹೇಗೆ ಹೋಗಿದ್ದರೋ ಅದೇ ರೀತಿ ಸಮಚಿತ್ತ ಭಾವದಿಂದ ಮರಳಿದ್ದು ಹಲವರ ಗಮನ ಸೆಳೆದಿದೆ ಮಾತ್ರವಲ್ಲ, ಅಪಾರ ಮೆಚ್ಚುಗೆಗೂ ಪಾತ್ರವಾಗಿದೆ. ಇಂದಿನ ಅವರ ಆ 'ಹೆಜ್ಜೆಗುರುತು' ಅಲ್ಲಿ ನೆರೆದಿದ್ದವರ ಮನದಲ್ಲಿ ಅಚ್ಚೊತ್ತಿರುವುದಂತೂ ನಿಜ.
ಹಾಜಬ್ಬ ಅವರು ತನ್ನ ಊರಾದ ಹರೇಕಳದ ಪಡ್ಪು ಗ್ರಾಮದಲ್ಲಿ ಕಳೆದ ಎರಡು ದಶಕಗಳಿಂದ ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಒದಗಿಸುತ್ತಿದ್ದಾರೆ. ಅವರು ಮಂಗಳೂರಿನಲ್ಲಿ ಕಿತ್ತಳೆ ಮಾರಿ ಸಿಗುವ ಆದಾಯದಿಂದಲೇ ಈ ವಿದ್ಯಾಸೇವೆ ನಡೆಸುತ್ತಿದ್ದು, ಅದಕ್ಕಾಗಿ ಯಾರಿಂದಲೂ ಕಾಸು ಕೇಳುತ್ತಿಲ್ಲ, ಧನಸಹಾಯ ಅಪೇಕ್ಷಿಸುತ್ತಿಲ್ಲ. ತಮ್ಮ ಈ ಸೇವೆಯಿಂದ ಅವರು ಅಕ್ಷರ ಸಂತ ಎಂದೇ ಕರೆಯಲ್ಪಡುತ್ತಿದ್ದು, ಅವರನ್ನು 2020ರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದನ್ನು ಎಲ್ಲರೂ ಸೂಕ್ತ ನಿರ್ಧಾರ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅವರು ಇಂದು ಪ್ರಶಸ್ತಿ ಸ್ವೀಕರಿಸುವಾಗಲೂ ಆ ಮೆಚ್ಚುಗೆ ವ್ಯಕ್ತವಾಗಿದ್ದು, ಅವರು ಪ್ರಶಸ್ತಿ ಸ್ವೀಕರಿಸಿದ ಆ ಸರಳತೆಯೇ ಜನರಿಗೆ ಅವರ ಕುರಿತ ಗೌರವವನ್ನು ಇಮ್ಮಡಿಗೊಳಿಸಿದೆ.