ನವದೆಹಲಿ: ದೇಶದ ಶಾಂತಿಯನ್ನು ಕದಡುವ ಪಾಕಿಸ್ತಾನದ ಯಾವುದೇ ಪ್ರಯತ್ನಕ್ಕೆ ಬಲಿಷ್ಠ ಹಾಗೂ ನವಭಾರತ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರಾಖಂಡ್ ನ ಪಿತ್ಹೊರಗರ್ಹ್ ನಲ್ಲಿ ನ.20 ರಂದು ಶಾಹೀದ್ ಸಮ್ಮಾನ್ ಯಾತ್ರೆಯನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ದೇಶದ ಶಾಂತಿಯನ್ನು ಕದಡುವುದಕ್ಕೆ ಪಾಕಿಸ್ತಾನ ಎಲ್ಲಾ ರೀತಿಯ ಯತ್ನಗಳನ್ನೂ ಮಾಡುತ್ತದೆ. ಆದರೆ ಭಾರತ ತಿರುಗೇಟು ನೀಡುತ್ತದೆ ಎಂಬ ಸಂದೇಶವನ್ನೂ ನೀಡಿದೆ. ಇದು ಬಲಿಷ್ಠ ಹಾಗೂ ನವಭಾರತ ಎಂದು ಹೇಳಿದ್ದಾರೆ.
ಸಂಘರ್ಷದ ಸಂದರ್ಭಗಳಲ್ಲಿ ಉಂಟಾಗುವ ಜೀವಹಾನಿಗೆ ನೀಡಲಾಗುತ್ತಿದ್ದ ಎಕ್ಸ್- ಗ್ರಾಷಿಯಾ ಮೊತ್ತವನ್ನು 2 ಲಕ್ಷದಿಂದ 8 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನ.18 ರಂದು ಲಡಾಖ್ ನ ರೆಜಾಂಗ್ ಲಾ ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿರುವ ರಾಜನಾಥ್ ಸಿಂಗ್, ಕುಮಾನ್ ಬೆಟಾಲಿಯನ್ ನ 124 ಮಂದಿ ಯೋಧರು ನಡೆಸಿದ ಧೀರೋದಾತ್ತ ಹೋರಾಟವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. 114 ಯೋಧರನ್ನು ಹತ್ಯೆ ಮಾಡಲಾಗಿತ್ತು ಆದರೆ ಪ್ರತೀಕಾರದಲ್ಲಿ ಭಾರತೀಯ ಯೋಧರು 1200 ಚೀನಾ ಯೋಧರನ್ನು ಹತ್ಯೆ ಮಾಡಿದ್ದಾರೆ. ಆ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತ್ತು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.