ಪೆರ್ಲ: ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಷಷ್ಠ್ಯಬ್ದ ಸಮಿತಿ ಕಾಟುಕುಕ್ಕೆ ಘಟಕದ ನೇತೃತ್ವದಲ್ಲಿ ದೇವಳ ಸಭಾಂಗಣದಲ್ಲಿ 'ಪುಲಮರ್ದ್ ಪರಿಪು ಪೋಪು' ಪ್ರಸಿದ್ಧ ನಾಟಿ ವೈದ್ಯರುಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಪರಂಪರಾಗತ ಹಳ್ಳಿ ಮದ್ದನ್ನು ಕರಗತ ಮಾಡಿ ಸಮಾಜದ ನೋವಿಗೆ ಸ್ಪಂದಿಸುವ ಕಾಸರಗೋಡು ಜಿಲ್ಲೆಯ ನಾಟಿ ವೈದ್ಯರುಗಳಾದ ಕೆಂಪು, ಸರ್ಪಸುತ್ತು, ಅರಸಿನ ಕಾಮಾಲೆಗೆ ಚಿಕಿತ್ಸೆ ನೀಡುವ ಶಂಕರ ರೈ ಮಾಸ್ತರ್ ಮಂಟ್ರಪ್ಪಾಡಿ, ಮೂಳೆ, ಗಂಟು ನೋವು ಚಿಕಿತ್ಸಕ, ಮಾಸಾಜ್ ತಜ್ಞ ಪದ್ಮನಾಭ ರೈ ಪೆರ್ಲ, ವಿಷ ಜಂತು, ಹುಚ್ಚುನಾಯಿ ಕಡಿತ, ಸರ್ಪಸುತ್ತು, ಮೂಲವ್ಯಾಗೆ ಚಿಕಿತ್ಸೆ ನೀಡುವ ಬಾಬು ಪೂಜಾರಿ ಕಾನ, ಅಗ್ನಿ ಬಾಧೆಗೆ ಚಿಕಿತ್ಸೆ ನೀಡುವ ಶ್ರೀನಿವಾಸ ಆಳ್ವ ಕಳತ್ತೂರು, ಪಶು ಚಿಕಿತ್ಸಕಿ, ನಳಿನಾಕ್ಷಿ ಕುಂಬತೊಟ್ಟಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಶರತ್ ಚಂದ್ರ ಶೆಟ್ಟಿ ಸಿದ್ದಿಕುಡಾಲು ಸಮನ್ವಯಕಾರರಾಗಿ ಭಾಗವಹಿಸಿದರು.ಹಿರಿಯರಾದ ಸಂಜೀವ ರೈ, ಯುವ ವಾಗ್ಮಿ ದೀಪಕ್ ಭಂಡಾರಮನೆ ಅನುಭವ ಹಂಚಿಕೊಂಡರು. ಲೇಖಕಿ ರಾಜಶ್ರೀ ಟಿ ರೈ ಪೆರ್ಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಒಡಿಯೂರು ಶ್ರೀಗಳ ಗುರುವಂದನೆ ಸಭಾ ಕಾರ್ಯಕ್ರಮದಲ್ಲಿ ನಾಟಿ ವೈದ್ಯರನ್ನು ಗೌರವಿಸಲಾಯಿತು.ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಜಿ.ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿ ವಂದಿಸಿದರು.