ಕೊಚ್ಚಿ: ಕೇಂದ್ರ ಮೀನುಗಾರಿಕೆ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಅವರ ಮೂರು ದಿನಗಳ ಲಕ್ಷದ್ವೀಪ ಪ್ರವಾಸ ಮುಕ್ತಾಯಗೊಂಡಿದೆ. ನಿನ್ನೆ ಮಧ್ಯಾಹ್ನ ಅವರು ಅಗತ್ತಿ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ತೆರಳಿದರು. ಲಕ್ಷದ್ವೀಪದ ಜನತೆಯ ಸಮಸ್ಯೆಗಳನ್ನು ಅರಿತು ಅಲ್ಲಿಂದ ತೆರಳಿದರು. ಎಲ್ಲಾ ಸಹಾಯವನ್ನು ನೀಡುವ ಭರವಸೆಯನ್ನವರು ನೀಡಿರುವರು.
ಮೀನುಗಾರರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ವಿಚಾರಿಸಿದರು. ಲಕ್ಷದ್ವೀಪದ ಜನರ ಮುಖ್ಯ ಆದಾಯದ ಮೂಲವೆಂದರೆ ಮೀನುಗಾರಿಕೆ. ಕಾರ್ಮಿಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಚಿವರಿಗೆ ವಿವರಿಸಿದರು. ಜನರ ಅಗತ್ಯತೆಗಳನ್ನು ಉನ್ನತಾಧಿಕಾರಿಗಳಿಗೆ ತಿಳಿಸಿ ಪರಿಹರಿಸುವ ಭರವಸೆ ನೀಡಲಾಗಿದೆ.
ಲಕ್ಷದ್ವೀಪದ ಮೀನುಗಾರಿಕಾ ವಲಯದಲ್ಲಿ ನವೀನ ಮತ್ತು ವೈಜ್ಞಾನಿಕ ತಂತ್ರಜ್ಞಾನ ರೂಪಿಸಲು ಮತ್ತು ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ಲಕ್ಷದ್ವೀಪ ಆಡಳಿತದ ಉನ್ನತ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸೂಚಿಸಿದರು. ಮೀನುಗಾರರೊಂದಿಗೆ ಸಚಿವರು ಆಹಾರ ಸೇವಿಸಿದರು.
ಆಡಳಿತಾಧಿಕಾರಿಗಳ ಸಲಹೆಗಾರ ಅನ್ಪರಸು ಮತ್ತು ಕೆ.ಎಸ್. ಟಿ. ದಾಮೋದರ್, ಒ.ಪಿ. ಮಿಶ್ರಾ ಸೇರಿದಂತೆ ಉನ್ನತ ಅಧಿಕಾರಿಗಳು ಸಚಿವರ ಜೊತೆಗಿದ್ದರು. ಅಗತ್ತಿ ದ್ವೀಪದ ಪ್ರವೇಶ ದ್ವಾರದಲ್ಲಿ ಮರದ ಸಸಿಗಳನ್ನು ನೆಡಲಾಯಿತು. 29ರಂದು ಸಚಿವರು ಲಕ್ಷದ್ವೀಪಕ್ಕೆ ಆಗಮಿಸಿದ್ದರು. ಪ್ರಧಾನ ಮಂತ್ರಿ ಮೀನುಗಾರಿಕಾ ಯೋಜನೆಯ ಅಂಗವಾಗಿ ಕಾರ್ಮಿಕರಿಗೆ ಮೀನುಗಾರಿಕೆ ಸಲಕರಣೆಗಳನ್ನು ಸಚಿವರು ವಿತರಿಸಿದರು.