ನವದೆಹಲಿ: ದೀಪಾವಳಿಯ ಸಂಭ್ರಮದಲ್ಲಿರಬೇಕಾದ ದೆಹಲಿ-ಎನ್ ಸಿಆರ್ ನ ಜನತೆ ಶುಕ್ರವಾರದಂದು ಬೆಳಿಗ್ಗೆ ಗಂಟಲು ತುರಿಕೆ, ಕಣ್ಗಳ ಭರ್ತಿ ನೀರು ತುಂಬಿಕೊಂಡು ಸಮಸ್ಯೆ ಎದುರಿಸುತ್ತಿದ್ದಾರೆ.
ಗುರುವಾರ ಸಂಜೆಯಿಂದ ಪ್ರಾರಂಭಗೊಂಡ ಪಟಾಕಿ ಭರಾಟೆಯ ಪರಿಣಾಮವಾಗಿ ದೆಹಲಿಯ ವಾಯುಗುಣಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು, ಇನ್ನೂ ಪರಿಸ್ಥಿತಿ ಹದಗೆಡಬಹುದು ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಯ ಪ್ರಕಾರ ಶ್ವಾಸಕೋಶಕ್ಕೆ ಹಾನಿಯಾಗಬಲ್ಲ ಪಿಎಂ2.5 ಪಾರ್ಟಿಕಲ್ ಗಳು 24 ಗಂಟೆಗಳಲ್ಲಿ ದೆಹಲಿ-ಎನ್ ಸಿಆರ್ ನಲ್ಲಿ ಹೆಚ್ಚಳವಾಗಿದೆ. ಗುರುವಾರ ಸಂಜೆಯ ವೇಳೆಗೆ ಪ್ರತಿ ಕ್ಯುಬಿಕ್ ಮೀಟರ್ ಗೆ 243 ಮೈಕ್ರೋಗ್ರಾಮ್ ಗಳಷ್ಟಿದ್ದ ಪಿಎಂ 2.5 ಮಟ್ಟ ಶುಕ್ರವಾರ ಬೆಳಿಗ್ಗೆ 9 ಗಂಟೆಯ ವೇಳೆಗೆ ಪ್ರತಿ ಕ್ಯುಬಿಲ್ ಮೀಟರ್ ಗೆ 410 ಮೈಕ್ರೋಗ್ರಾಮ್ ನಷ್ಟಾಗಿದೆ. ಇದು ಪ್ರತಿ ಕ್ಯುಬಿಕ್ ಮೀಟರ್ ಗೆ 60 ರಷ್ಟಿರಬೇಕಾಗಿದ್ದ ಸುರಕ್ಷತೆಯ ಮಿತಿಗಿಂತಲೂ 7 ಪಟ್ಟು ಹೆಚ್ಚಳವಾಗಿದೆ.
ಪಿಎಂ10 ಮಟ್ಟ ಶುಕ್ರವಾರದಂದು ಬೆಳಿಗ್ಗೆ 5 ಗಂಟೆ ವೇಳೆಗೆ ದೆಹಲಿ-ಎನ್ ಸಿಆರ್ ಭಾಗದಲ್ಲಿ ಪ್ರತಿ ಕ್ಯುಬಿಕ್ ಮೀಟರ್ ಗೆ 500 ಮೈಕ್ರೋಗ್ರಾಮ್ ಗಳಿಗೆ ಏರಿಕೆಯಾಗಿದ್ದು, ಬೆಳಿಗ್ಗೆ 9 ರ ವೇಳೆಗೆ 511 ಮೈಕ್ರೋಗ್ರಾಮ್ ಗಳಿಗೆ ಏರಿಕೆಯಾಗಿದೆ.
ಸದ್ಯಕ್ಕೆ ದೆಹಲಿ- ಎನ್ ಸಿಆರ್ ಭಾಗದಲ್ಲಿ ದಾಖಲಾಗಿರುವ ವಾಯುಗುಣಮಟ್ಟವನ್ನು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ ಎಪಿ) ಪಿಎಂ2.5 ಹಾಗೂ ಪಿಎಂ10 ಮಟ್ಟದಲ್ಲಿನ ಎಮರ್ಜೆನ್ಸಿ ವಿಭಾಗದಲ್ಲಿ ಪಟ್ಟಿ ಮಾಡಿದ್ದು ಇನ್ನೂ 48 ಗಂಟೆಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಕಾಲ ಪ್ರತಿ ಕ್ಯುಬಿಕ್ ಮೀಟರ್ ಗೆ ಅನುಕ್ರಮಾವಗಿ 300 ಮೈಕ್ರೋಗ್ರಾಮ್ ಹಾಗೂ 500 ಮೈಕ್ರೋಗ್ರಾಮ್ ಗಳಷ್ಟು ಇರಲಿದೆ ಎಂದು ಅಂದಾಜಿಸಿದೆ.
ತೀವ್ರವಾದ ಮಟ್ಟದಲ್ಲಿ ದೆಹಲಿಯ ಇಂದು ವಾಯು ಗುಣಮಟ್ಟ ಕುಸಿತನವನ್ನು ದಾಖಲಿಸಿದೆ. ಕಡಿಮೆ ತಾಪಮಾನ ಹಾಗೂ ಮಂಜಿನ ವಾತಾವರಣ ಕಂಡುಬಂದಿದ್ದು, ಮಾಲಿನ್ಯಕಾರಕಗಳ ಶೇಖರಣೆಗೆ ಅವಕಾಶವಾಗಿದೆ.