ನವದೆಹಲಿ: ಕ್ರಿಪ್ಟೋಕರೆನ್ಸಿ ತಪ್ಪಾದ ಕೈಗೆ ಹೋಗುವ ಮೂಲಕ ದುರ್ಬಳಕೆ ಆಗುತ್ತಿರುವ ಅಪಾಯವನ್ನು ಗಮನಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಡಿಜಿಟಲ್ ಕರೆನ್ಸಿಗಳ ಜಾಹೀರಾತುಗಳನ್ನು ನಿಲ್ಲಿಸುವ ಯಾವುದೇ ನಿರ್ಧಾರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಬಿಟ್‌ಕಾಯಿನ್ ಅನ್ನು ದೇಶದಲ್ಲಿ ಯಾವುದೇ ರೀತಿಯ ಕರೆನ್ಸಿಯಾಗಿ ಗುರುತಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರವು ಹೊಂದಿಲ್ಲ ಎಂದು ಹೇಳಿದರು. ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಸರ್ಕಾರವು ಅಂಕಿ-ಅಂಶಗಳನ್ನು ಸಂಗ್ರಹಿಸುವುದಿಲ್ಲ ಎಂದು ಅವರು ಉಲ್ಲೇಖಿಸಿದರು.
ಕ್ರಿಪ್ಟೋಕರೆನ್ಸಿಗಳ ನಿಯಂತ್ರಕ ಸಾಮರ್ಥ್ಯದ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, "ಮಸೂದೆಗಾಗಿ ಕಾಯೋಣ" ಎಂದು ಹೇಳಿದರು. ಹಳೆಯ ಮಸೂದೆಯನ್ನು ಮರು ಸೃಷ್ಟಿಸುವುದು ಸೇರಿದಂತೆ ಇತರೆ ಆಯಾಮಗಳಿದ್ದವು, ಆದರೆ ನಾವು ಹೊಸ ಮಸೂದೆಯನ್ನೇ ರಚಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ" ಎಂದು ತಿಳಿಸಿದರು.
ಡಿಜಿಟಲ್ ಕರೆನ್ಸಿಯ ಪ್ರಸ್ತಾವನೆ ಬಗ್ಗೆ ಸರ್ಕಾರದ ಉಲ್ಲೇಖ: ಬಿಟ್‌ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್ ಕರೆನ್ಸಿ ಬಗ್ಗೆ ಮಾತನಾಡಿತ್ತು. ಕಳೆದ ಅಕ್ಟೋಬರ್‌ನಲ್ಲಿ ಆರ್‌ಬಿಐ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಪ್ರಸ್ತಾವನೆಯನ್ನು ಪರಿಚಯಿಸಿತ್ತು. 'ಬ್ಯಾಂಕ್ ನೋಟು' ವ್ಯಾಖ್ಯಾನದ ಅಡಿಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಸೇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದರ ಮಧ್ಯೆ ಸ್ಥೂಲ-ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆಗೆ ಅಪಾಯಗಳನ್ನು ಉಂಟುಮಾಡುವ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಆರ್‌ಬಿಐ ಪದೇ ಪದೇ ಕಳವಳ ವ್ಯಕ್ತಪಡಿಸಿತ್ತು.
ದೇಶದ ತೆರಿಗೆ ವ್ಯವಸ್ಥೆಗೆ ಕ್ರಿಪ್ಟೋಕರೆನ್ಸಿ ಅಪಾಯಕಾರಿ:
"ಕ್ರಿಪ್ಟೋಕರೆನ್ಸಿಯನ್ನು ಕಾನೂನು ಟೆಂಡರ್ ಎಂದು ಗುರುತಿಸಲಾಗುವುದಿಲ್ಲ. ಏಕೆಂದರೆ ಇದು ದೇಶದ ಕರೆನ್ಸಿ ಮತ್ತು ತೆರಿಗೆ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. "ಕಾನೂನುಬಾಹಿರ ಅಥವಾ ದೇಶ-ವಿರೋಧಿ ಕೆಲಸಕ್ಕೆ ಬಳಸುವ ಕ್ರಿಪ್ಟೋಕರೆನ್ಸಿಯ ಮೂಲವನ್ನು ಪತ್ತೆಹಚ್ಚುವುದಕ್ಕೆ ಕಟ್ಟುನಿಟ್ಟಾದ ಕಾರ್ಯ ವಿಧಾನವು ಜಾರಿಗೆ ತರಬೇಕಿದೆ," ಎಂದು ತಜ್ಞರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕ್ರಮದಿಂದಾಗಿ ಕ್ರಿಪ್ಟೋ ಮಾರುಕಟ್ಟೆಗಳು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಅಪಾಯವನ್ನು ತಪ್ಪಿಸುವ ಗುರಿಯನ್ನು ಹೊಂದಿವೆ ಎಂದು ತಿಳಿಸಿದೆ. ಎರಡು ವಾರಗಳ ಹಿಂದೆ ಬಿಜೆಪಿ ಮುಖಂಡ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿಯು ಕ್ರಿಪ್ಟೋಕರೆನ್ಸಿಗಳ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ಡಿಜಿಟಲ್ ಕರೆನ್ಸಿಗಳನ್ನು ಸಂಪೂರ್ಣ ನಿಷೇಧಿಸುವುದರ ಬದಲಿಗೆ ನಿಯಂತ್ರಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು.
ದೇಶದಲ್ಲಿ ನಿರ್ಬಂಧದ ಬದಲಿಗೆ ನಿಯಂತ್ರಣ:
ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವುದರ ಬದಲಿಗೆ ನಿಯಂತ್ರಣ ಸಾಧಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದು ಸಾಕಷ್ಟು ಸುದ್ದಿಯಾಗಿತ್ತು. "ಕ್ರಿಪ್ಟೋಕರೆನ್ಸಿಗಳು ದುರುಪಯೋಗವಾಗದಂತೆ ನಿಯಂತ್ರಿಸುವ ಕಾರ್ಯ ವಿಧಾನವು ಜಾರಿಯಲ್ಲಿರುತ್ತದೆ. ಕ್ರಿಪ್ಟೋಕರೆನ್ಸಿ ಮೂಲಕ ನಡೆಯುತ್ತಿರುವ ಭೂಗತ ವಹಿವಾಟುಗಳ ಬಗ್ಗೆ ಸರ್ಕಾರವು ಕಾಳಜಿ ವಹಿಸುತ್ತದೆ. ವಿಶೇಷವಾಗಿ 'ಹವಾಲಾ' ಮತ್ತು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದಕ್ಕೆ ಕ್ರಿಪ್ಟೋಕರೆನ್ಸಿಗಳ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ಲಕ್ಷ್ಯ ವಹಿಸಲಾಗುತ್ತದೆ. ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲಾಗುತ್ತದೆಯೇ ವಿನಃ ಸಂಪೂರ್ಣವಾಗಿ ನಿಷೇಧಿಸಲಾಗುವುದಿಲ್ಲ ಎಂದು ತಜ್ಞರು ಊಹಿಸಿದ್ದರು.
ಭಯೋತ್ಪಾದಕರಿಗೆ ಹಣ ಒದಗಿಸುವ ಶಂಕೆ:
ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಸಂಬಂಧಿಸಿದಂತೆ "ನವೆಂಬರ್ ತಿಂಗಳ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಈ ವೇಳೆ ಸರ್ಕಾರವು ಕ್ರಿಪ್ಟೋಕರೆನ್ಸಿ ಕುರಿತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಒಮ್ಮತ ಮೂಡಿತ್ತು. "ಅನಿಯಂತ್ರಿತ" ಕ್ರಿಪ್ಟೋ ಮಾರುಕಟ್ಟೆಗಳು ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮಾರ್ಗಗಳಾಗಲು ಬಿಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.