ತ್ರಿಶೂರ್: ವಿವಾಹವಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗೆಳತಿಯ ಜೊತೆ ಪರಾರಿಯಾಗಿರುವ ವಿಲಕ್ಷಣ ಘಟನೆ ಕೇರಳದಲ್ಲಿ ವರದಿಯಾಗಿದೆ.
ಕೇರಳದ ತ್ರಿಶೂರ್ ನ ಮಹಿಳೆ ತನ್ನ ವಿವಾಹವಾದ ಮರುದಿನ ನಾಪತ್ತೆಯಾಗಿದ್ದಾರೆ. ನವವಿವಾಹಿತೆಯ ಪತಿಗೆ ಹೃದಯಾಘಾತ ಸಂಭವಿಸಿದ್ದು ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೆ ಒಳಪಟ್ಟಿದ್ದಾರೆ. ಸೋಮವಾರ ಈ ಘಟನೆ ಬೆಳಕಿಗೆ ಬಂದಿದ್ದು, ತ್ರಿಶೂರ್ ನ ಪಝುವಿಲ್ ನ 23 ವರ್ಷದ ಮಹಿಳೆ ಈ ರೀತಿ ಮಾಡಿದ್ದಾರೆ. ಆರು ದಿನಗಳ ಸುಧೀರ್ಘ ತನಿಖೆಯ ನಂತರ ಈ ಮಾಹಿತಿ ಬೆಳಕಿಗೆ ಬಂದಿದೆ.
ವಿವಾಹಕ್ಕೂ ಮುನ್ನವೇ ಈಕೆ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಯೋಜಿಸಿದ್ದರು. ಆದರೆ ತನ್ನ ಪೋಷಕರಿಂದ ಚಿನ್ನಾಭರಣಗಳನ್ನು ಪಡೆಯುವುದಕ್ಕಾಗಿ ವಿವಾಹ ಕಾರ್ಯಕ್ರಮ ನಡೆಯುವವರೆಗೂ ಕಾದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ.
ಆಕೆಯ ಪತಿ ಚವಕ್ಕಾಡ್ ನ ಮೂಲದವರಾಗಿದ್ದು, ಪೊಲೀಸ್ ಠಾಣೆಯಲ್ಲಿ ಅ.25 ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ನೂತನ ದಂಪತಿ ವಾಣಿಜ್ಯ ಬ್ಯಾಂಕ್ ಗೆ ಭೇಟಿ ನೀಡಿದ್ದರು. ಈ ವೇಳೆ ನನ್ನಿಂದ ಮೊಬೈಲ್ ಪಡೆದ ಮಹಿಳೆ ತನ್ನ ಸ್ನೇಹಿತೆಯನ್ನು ಭೇಟಿ ಮಾಡಿ ತಕ್ಷಣವೇ ವಾಪಸ್ಸಾಗುತ್ತೇನೆ ಎಂದು ತಿಳಿಸಿ ಹೋಗಿದ್ದರು. ದ್ವಿಚಕ್ರವಾಹನದಲ್ಲಿ ತೆರಳಿದ ಆಕೆ ಮತ್ತೆ ವಾಪಸ್ ಬರಲೇ ಇಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದರು.
ಸಂಜೆ 5 ವರೆಗೂ ಕಾದಿದ್ದ ಆ ವ್ಯಕ್ತಿ ತನ್ನ ಪತ್ನಿ ವಾಪಸ್ಸಾಗದೇ ಇದ್ದದ್ದನ್ನು ನೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತ್ರಿಶೂರ್ ನಿಂದ ಆ ಮಹಿಳೆ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕಾಗಿ ಚೆನ್ನೈ ಗೆ ಟ್ರೈನ್ ಟಿಕೆಟ್ ಕಾಯ್ದಿರಿಸಿದ್ದರೆಂದು ತನಿಖೆಯಿಂದ ಬಹಿರಂಗಗೊಂಡಿದೆ. ಆದರೆ ಇಬ್ಬರೂ ಮಹಿಳೆಯರು ರೈಲಿನಲ್ಲಿ ತೆರಳದೇ ಕೊಟ್ಟಾಯಂಗೆ ಬಸ್ ಮೂಲಕ ಪ್ರಯಾಣಿಸಿ ಅಲ್ಲಿಂದ ಚೆನ್ನೈ ಗೆ ರೈಲಿನಲ್ಲಿ ಮರುದಿನ ತೆರಳಿದ್ದಾರೆ. ಚೆನ್ನೈ ನಿಂದ ಮಧುರೈಗೆ ತೆರಳಿ ಅಲ್ಲಿ ಹೊಟೇಲ್ ಒಂದರಲ್ಲಿದ್ದರು ಎಂದು ಪೊಲೀಸರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮಧುರೈ ನಲ್ಲಿ ಒಂದು ದಿನ ಕಳೆದ ಬಳಿಕ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು ವಾಪಸ್ ಪಡೆಯುವುದಕ್ಕಾಗಿ ತ್ರಿಶೂರ್ ಗೆ ಆಗಮಿಸಿದ್ದಾರೆ. ಅಲ್ಲಿಂದ ಎರ್ನಾಕುಲಂ ಗೆ ದ್ವಿಚಕ್ರ ವಾಹನದಲ್ಲೇ ತೆರಳಿದ ಮಹಿಳೆಯರು 10 ದಿನಗಳಿಗೆ ಪಾರ್ಕಿಂಗ್ ಶುಲ್ಕವನ್ನು ಮುಂಗಡವಾಗಿ ನೀಡಿ ಮತ್ತೆ ಮಧುರೈಗೆ ತೆರಳಿದ್ದರು.
ಇಬ್ಬರೂ ಮಹಿಳೆಯರು ಮಧುರೈ ನಲ್ಲೇ ಟೆಕ್ಸ್ ಟೈಲ್ಸ್ ಉದ್ಯೋಗ ಹುಡುಕಿ ಅಲ್ಲೇ ಜೀವಿಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಚ್ಚರಿಯೆಂದರೆ ಇಬ್ಬರೂ ಮಹಿಳೆಯರು ನವವಿವಾಹಿತರಾಗಿದ್ದಾರೆ. ಮತ್ತೋರ್ವ ಮಹಿಳೆ ಸಹ ಚಿನ್ನಾಭರಣಗಳ ಸಮೇತ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.