ಕಾಸರಗೋಡು: ಜಿಹಾದ್ ಹೆಸರಲ್ಲಿ ಅನಾಚಾರ ನಡೆಸುವುದು ಹಾಗೂ ಈ ಮೂಲಕ ಮುಸ್ಲಿಂ ಸಮುದಾಯವನ್ನು ಅವಹೇಳನ ನಡೆಸುತ್ತಿರುವುದರ ವಿರುದ್ಧ ಜನಜಾಗೃತಿ ಕಾರ್ಯಕ್ರಮ ನ. 20ರಂದು ಬೆಳಗ್ಗೆ 9.30ಕ್ಕೆ ಚಟ್ಟಂಚಾಲ್‍ನ ಅಲ್ ಒವೈಸ್ ಸಭಾಂಗಣದಲ್ಲಿ ನಡೆಯಲಿರುವುದಾಗಿ ಸಮಸ್ತ ಮುಖಂಡ ಯು.ಎಂ ಅಬ್ದುಲ್ ರಹಮಾನ್ ಮೌಲವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಸ್ತ ಕೇರಳ ಜಂ-ಇಯತ್ತುಲ್ ಉಲಮಾ ರಾಜ್ಯ ವ್ಯಾಪಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಅಂಗವಾಗಿ ಸಮಸ್ತ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಸಂದರ್ಭ 'ಜಿಹಾದ್ ವಿಮರ್ಶೆ ಹಾಗೂ ವಸ್ತುಸ್ಥಿತಿ'ಎಂಬ ಬಗ್ಗೆ ವಿಷಯ ಮಂಡನೆ ನಡೆಯುವುದು. ಸಮಸ್ತ ಕೇರಳ ಜಂ ಇಯತ್ತುಲ್ ಉಲಮಾ ರಾಜ್ಯ ಸಮಿತಿ ಅಧ್ಯಕ್ಷ ಸಯ್ಯದ್ ಮಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಸಮಾರಂಭ ಉದ್ಘಾಟಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಸ್ ತಙಳ್ ಅಧ್ಯಕ್ಷತೆ ವಹಿಸುವರು. ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಮುಖ್ಯ ಭಾಷಣ ಮಾಡುವರು. ಸಮಸ್ತದ ಪ್ರಮುಖರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಸ್ ತಙಳ್ ಮದನಿ, ಅಬ್ದುಸಲಾಂ ದಾರಿಮಿ ಆಲಂಪಾಡಿ, ಹುಸೈನ್ ತಙಳ್ ಮಸ್ತಿಕುಂಡು, ಸಿ.ಕೆ.ಕೆ ಮಣಿಯೂರ್, ಬಶೀರ್ ದಾರಿಮಿ ತಳಂಗರೆ, ಮೊಯ್ದು ಚೆರ್ಕಳ ಉಪಸ್ಥಿತರಿದ್ದರು.