ಗ್ಲಾಸ್ಗೋ: ಜಿ20 ಮತ್ತು ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಮತ್ತು ಬ್ರಿಟನ್ ಗೆ ತೆರಳಿದ್ದ ಪ್ರಧಾನಿ ಮೋದಿ ಇದೀಗ ಭಾರತದತ್ತ ವಾಪಸ್ ಆಗುತ್ತಿದ್ದಾರೆ.
ಜಿ20 ಮತ್ತು ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆಗಳಲ್ಲಿ ಸಾಕಷ್ಟು ವಿಶ್ವ ನಾಯಕರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದ ಪ್ರಧಾನಿ ಮೋದಿ ತಮ್ಮ ಪ್ರವಾಸ ಅಂತಿಮ ದಿನ ಗ್ಲಾಸ್ಗೋದಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದರು.
ಬಳಿಕ ಗ್ಲಾಸ್ಗೋದಲ್ಲಿ ಭಾರತೀಯ ಸಮುದಾಯದವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಕೆಲಹೊತ್ತು ಚರ್ಚೆ ನಡೆಸಿದರು.
ಪಕ್ಷ ಸೇರುವಂತೆ ಆಹ್ವಾನ ನೀಡಿದ ಇಸ್ರೇಲ್ ಪ್ರಧಾನಿ, ವಿಡಿಯೋ ವೈರಲ್
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ತಮ್ಮ ಪಕ್ಷ ಸೇರಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಆಹ್ವಾನ ನೀಡಿದ್ದಾರೆ.
‘ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆ’ ಬಳಿಕ ಮೋದಿ ಮತ್ತು ಬೆನೆಟ್ ನಡುವೆ ಮೊದಲ ಔಪಚಾರಿಕ ಸಭೆ ನಡೆಯಿತು. ಆ ವೇಳೆ ಉನ್ನತ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ವಿಡಿಯೊದಲ್ಲಿರುವಂತೆ, ‘ನೀವು ಇಸ್ರೇಲ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ’ ಎಂದು ಮೋದಿಯವರಿಗೆ ಬೆನೆಟ್ ತಿಳಿಸಿದ್ದಾರೆ.
ಬೆನೆಟ್ ಅವರಿಗೆ ಪ್ರತಿಕ್ರಿಯಿಸಿರುವ ಮೋದಿ ಧನ್ಯವಾದಗಳನ್ನು ಹೇಳಿದ್ದಾರೆ. ಮೋದಿಯವರಿಗೆ ಹಸ್ತಲಾಘವ ಮಾಡಿದ ಬೆನೆಟ್, 'ಬನ್ನಿ ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ' ಎಂದು ಆಹ್ವಾನ ನೀಡಿದ್ದಾರೆ. ಬೆನೆಟ್ ಅವರ ಈ ಹಾಸ್ಯಚಟಾಕಿಯು ಮೋದಿ ಅವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.