ನವದೆಹಲಿ: ಲಿಂಗತ್ವ ತಟಸ್ಥ ನೀತಿಯಡಿ ಬೋಧಕರ ತರಬೇತಿಗಾಗಿ ಸಂಸ್ಥೆ ಹೊರತಂದಿರುವ ಕೈಪಿಡಿ ಹಲವು ನ್ಯೂನತೆಗಳಿಂದ ಕೂಡಿದ್ದು, ಕೂಡಲೇ ಇವುಗಳನ್ನು ಸರಿಪಡಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ( ಎನ್‌ಸಿಪಿಸಿಆರ್) ಎನ್‌ಸಿಇಆರ್‌ಟಿಗೆ ಸೂಚಿಸಿದೆ.
ನವದೆಹಲಿ: ಲಿಂಗತ್ವ ತಟಸ್ಥ ನೀತಿಯಡಿ ಬೋಧಕರ ತರಬೇತಿಗಾಗಿ ಸಂಸ್ಥೆ ಹೊರತಂದಿರುವ ಕೈಪಿಡಿ ಹಲವು ನ್ಯೂನತೆಗಳಿಂದ ಕೂಡಿದ್ದು, ಕೂಡಲೇ ಇವುಗಳನ್ನು ಸರಿಪಡಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ( ಎನ್‌ಸಿಪಿಸಿಆರ್) ಎನ್‌ಸಿಇಆರ್‌ಟಿಗೆ ಸೂಚಿಸಿದೆ.
ಕೆಲ ಮಕ್ಕಳು ಜೈವಿಕ ಕಾರಣಗಳಿಂದಾಗಿ ವಿಭಿನ್ನ ಅಗತ್ಯಗಳನ್ನು ಹೊಂದಿರುತ್ತಾರೆ. ಇಂಥ ಮಕ್ಕಳಿಗೆ ಸಮಾನ ಹಕ್ಕುಗಳನ್ನು ಈ ಕೈಪಿಡಿ ನಿರಾಕರಿಸುತ್ತದೆ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಎನ್‌ಸಿಇಆರ್‌ಟಿ ನಿರ್ದೇಶಕರಿಗೆ ಪತ್ರ ಬರೆದಿರುವ ಆಯೋಗ, 'ಕೈಪಿಡಿಯಲ್ಲಿನ ನ್ಯೂನತೆಗಳ ಬಗ್ಗೆ ಆಯೋಗಕ್ಕೆ ಸಾಕಷ್ಟು ದೂರುಗಳು ಬಂದಿವೆ' ಎಂದು ಹೇಳಿದೆ.
'ನೂತನ ಕೈಪಿಡಿಯು ಎಲ್‌ಜಿಬಿಟಿಕ್ಯೂ ಸಮುದಾಯದ ಬಗ್ಗೆ ಶಿಕ್ಷಕರಲ್ಲಿ ಅರಿವು ಮೂಡಿಸುವ ಹಾಗೂ ಅವರ ಜೈವಿಕ ಅಗತ್ಯಗಳ ಕುರಿತು ಶಿಕ್ಷಕರನ್ನು ಸಂವೇದನಾಶೀಲರನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಲಿಂಗಪರಿವರ್ತಿತ ಹಾಗೂ ಲಿಂಗತ್ವ ನಿರ್ಧಾರವಾಗದ ಮಕ್ಕಳ ಬಗ್ಗೆ ಶಾಲೆಗಳು ಸಂವೇದನಾಶೀಲವಾಗಬೇಕು ಹಾಗೂ ಒಳಗೊಳ್ಳುವಿಕೆ ತತ್ವದಡಿ ಶಾಲೆಗಳು ಕಾರ್ಯ ನಿರ್ವಹಿಸಬೇಕು ಎಂಬುದು ಕೈಪಿಡಿಯ ಉದ್ದೇಶವಾಗಿದೆ'
ಲಿಂಗತ್ವ ತಟಸ್ಥ ನೀತಿಗೆ ಅನುಗುಣವಾಗಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಬೇಕು. ಸಮವಸ್ತ್ರಗಳನ್ನು ನೀಡಬೇಕು, ಲಿಂಗತ್ವದ ಆಧಾರದಲ್ಲಿ ಮಕ್ಕಳನ್ನು ವರ್ಗೀಕರಿಸಿ, ಕೆಲವರನ್ನು ಶಾಲಾ ಚಟುವಟಿಕೆಗಳಿಂದ ದೂರ ಮಾಡುವ ಪರಿಪಾಟವನ್ನು ನಿರ್ಮೂಲನೆ ಮಾಡಬೇಕು ಎಂದು ಕೈಪಿಡಿ ವಿವರಿಸುತ್ತದೆ.
'ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ನೀಡಬೇಕಾದ ಸವಲತ್ತುಗಳ ಬಗ್ಗೆ ಕೈಪಿಡಿಯಲ್ಲಿ ವಿವರಿಸಲಾಗಿದೆ. ಆದರೆ, ಕೈಪಿಡಿಯಲ್ಲಿನ ಅಂಶಗಳು ವಾಸ್ತವದಲ್ಲಿ ಈ ಮಕ್ಕಳ ಅಗತ್ಯಗಳಿಗೆ ಸರಿಹೊಂದುವ ರೀತಿಯಲ್ಲಿ ಇಲ್ಲ ಎಂಬುದು ತಿಳಿದುಬರುತ್ತದೆ' ಎಂದು ದೂರಿನಲ್ಲಿ ವಿವರಿಸಲಾಗಿದೆ.