ಮುಂಬೈ: 'ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ' ಎಂದು ಹೇಳಿಕೆ ನೀಡಿರುವ ನಟಿ ಕಂಗನಾ ರನೌತ್ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, 'ಸ್ವಾತಂತ್ರ್ಯ ಹೋರಾಟದ ಕುರಿತು ಕಂಗನಾ ಅವರ ಹೇಳಿಕೆ ಸಂಪೂರ್ಣವಾಗಿ ತಪ್ಪು. ಸ್ವಾತಂತ್ರ್ಯ ಚಳವಳಿಯ ಬಗ್ಗೆ ನಕಾರಾತ್ಮಕವಾಗಿ ಟೀಕೆ ಮಾಡಲು ಯಾರಿಗೂ ಹಕ್ಕಿಲ್ಲ' ಎಂದು ಹೇಳಿದ್ದಾರೆ.
'ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಕಾರ್ಯವನ್ನು ನಟಿ ಕಂಗನಾ ಶ್ಲಾಘಿಸಬಹುದು. ಆದರೆ, ಅವರಿಗೆ ಸ್ವಾತಂತ್ರ್ಯ ಹೋರಾಟವನ್ನು ಟೀಕಿಸುವ ಹಕ್ಕಿಲ್ಲ' ಎಂದೂ ಚಂದ್ರಕಾಂತ್ ಪಾಟೀಲ್ ಹರಿಹಾಯ್ದಿದ್ದಾರೆ.
ಇದೇ ವೇಳೆ ದೆಹಲಿ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ಅವರು ಕಂಗನಾ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. 'ಕಂಗನಾ ಹೇಳಿಕೆಯು ಸ್ವಾತಂತ್ರ್ಯದ ಅತಿದೊಡ್ಡ ದುರುಪಯೋಗ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಮಾಡಿದ ಅವಮಾನ. ಭಾರತದ ನ್ಯಾಯಾಂಗ ವ್ಯವಸ್ಥೆಯು ಇದನ್ನು ಗಮನಿಸಬೇಕು' ಎಂದು ಕಪೂರ್ ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಬಿಜೆಪಿ ನಾಯಕ ವರುಣ್ ಗಾಂಧಿ ಸಹ ಕಂಗನಾ ವಿರುದ್ಧ ಹರಿಹಾಯ್ದಿದ್ದು, 'ಇದು ದೇಶ ವಿರೋಧಿ ಕೃತ್ಯ ಮತ್ತು ಕಂಗನಾ ಅವರನ್ನು ದೇಶವಿರೋಧಿ' ಎನ್ನಬಹುದು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಹಾಗೂ ಸೆಲೆಬ್ರಿಟಿಗಳು ಕಂಗನಾ ಹೇಳಿಕೆಯನ್ನು ಖಂಡಿಸಿದ್ದಾರೆ. ಆಮ್ ಆದ್ಮಿ ಪಕ್ಷವು ಕಂಗನಾ ವಿರುದ್ಧ ಮುಂಬೈಯಲ್ಲಿ ದೂರು ನೀಡಿದೆ.