ನವದೆಹಲಿ: ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಸಂಸತ್‌ನ ಮುಂಬರುವ ಬಜೆಟ್ ಅಧಿವೇಶನದ ವೇಳೆ ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಹತ್ತಕ್ಕೂ ಅಧಕ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.
ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಎಲ್‌ಪಿಎಫ್, ಯುಟಿಯಸಿ ಮತ್ತಿತರ ಕಾರ್ಮಿಕ ಸಂಘಟನೆಗಳ ಮುಖಂಡರು ನವೆಂಬರ್ 1ರಂದು ನಡೆಸಿದ ಸಭೆಯಲ್ಲಿ ಮುಷ್ಕರ ನಡೆಸುವ ಕುರಿತು ಚರ್ಚಿಸಲಾಗಿದ್ದು, ಮುಷ್ಕರದ ದಿನಾಂಕವನ್ನು ಮುಂದಿನ ಸಭೆಯಲ್ಲಿ ಅಂತಿಮಗೊಳ್ಳಲಿದೆ.
ಕೇಂದ್ರದ ಖಾಸಗೀಕರಣ ನೀತಿ ಹಾಗೂ ಸರ್ಕಾರಿ ಆಸ್ತಿಯನ್ನು ಖಾಸಗಿ ಕಂಪೆನಿಗಳಿಗೆ ಪರಭಾರೆ ಮಾಡುತ್ತಿರುವ ಕ್ರಮದಿಂದ ಉಂಟಾಗುವ ಪರಿಣಾಮಗಳು, ಬೆಲೆ ಏರಿಕೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ರೈತರ ಬೇಡಿಕೆಗಳ ಈಡೇರಿಕೆಗೆ ನಿರಾಕರಿಸುತ್ತಿರುವ ಸರ್ಕಾರದ ಜನವಿರೋಧಿ ನೀತಿ ಕುರಿತು ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ಚರ್ಚಿಸಲಾಗಿದೆ.
ಮುಷ್ಕರದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ-- ದೆಹಲಿಯಲ್ಲಿ ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ನಂತರ ರಾಜ್ಯ ಮಟ್ಟದ ಸಮಾವೇಶ, ಪ್ರತಿಭಟನಾ ಮೆರವಣಿಗೆ ಹಾಗೂ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.