ನವದೆಹಲಿ :ಅಫ್ಘಾನಿಸ್ತಾನ ಕುರಿತು ಭಾರತವು ಆಯೋಜಿಸಿರುವ ಪ್ರಾದೇಶಿಕ ಭದ್ರತಾ ಮಾತುಕತೆಗಳಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಚೀನಾ ಮಂಗಳವಾರ ತಿಳಿಸಿದೆ.
ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುವಲ್ಲಿ ತೊಂದರೆಯಿಂದಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಸಾಧ್ಯವಾಗುವುದಿಲ್ಲ.
ಭಾರತವು ಬುಧವಾರ ದಿಲ್ಲಿಯಲ್ಲಿ ಅಫ್ಘಾನಿಸ್ತಾನ ಕುರಿತು ಪ್ರಾದೇಶಿಕ ಮಾತುಕತೆಗಳನ್ನು ಆಯೋಜಿಸಿದ್ದು,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರಷ್ಯಾ,ಇರಾನ್,ಕಝಖಸ್ತಾನ್,ಕಿರ್ಗಿಜ್ ರಿಪಬ್ಲಿಕ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೆಕಿಸ್ತಾನ್‌ಗಳ ಹಿರಿಯ ಭದ್ರತಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಉನ್ನತ ಮಟ್ಟದ ಸಭೆಯು ಅಫ್ಘಾನಿಸ್ತಾನದಲ್ಲಿಯ ಇತ್ತೀಚಿನ ಬೆಳವಣಿಗೆಗಳಿಂದಾಗಿ ಉದ್ಭವಿಸಿರುವ ಪ್ರದೇಶದಲ್ಲಿಯ ಭದ್ರತಾ ಸ್ಥಿತಿಯನ್ನು ಪುನರ್‌ಪರಿಶೀಲಿಸಲಿದೆ. ಸಂಬಂಧಿತ ಭದ್ರತಾ ಸವಾಲುಗಳುನ್ನು ಎದುರಿಸಲು ಕೈಗೊಳ್ಳಬೇಕಿರುವ ಕ್ರಮಗಳು ಮತ್ತು ಶಾಂತಿ,ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಅಫ್ಘಾನಿಸ್ತಾನದ ಜನತೆಗೆ ಬೆಂಬಲದ ಕುರಿತು ಸಭೆಯು ಚರ್ಚಿಸಲಿದೆ ಎಂದು ಸಚಿವಾಲಯವು ಹೇಳಿದೆ.