ಪೆರ್ಲ: ಯಕ್ಷಗಾನದ ಸಮಗ್ರ ಬೆಳವಣಿಗೆಗೆ ಬದುಕನ್ನು ತೇಯ್ದ ಮಹನೀಯರ ಸ್ಮರಣೆ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ. ಶಿಕ್ಷಕರಾಗಿ, ಸಾಹಿತಿ, ಸಾಂಸ್ಕøತಿಕ ಸಂಘಟಕರಾಗಿ ಮಾ.ಭ.ಪೆರ್ಲ ಬದುಕಿನ ನಿಡುಗಾಲ ಸಮರ್ಪಿಸಿದ ಕೊಡುಗೆ ಎಂದಿಗೂ ಸರಿಗಟ್ಟಲಾಗದ ದಾಖಲೆಯಾಗಿ ಬೆಳಗುವಂತದ್ದು ಎಂದು ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ತಿಳಿಸಿದರು.
ಪೆರ್ಲದ ಬಲಿಪ ನಾರಾಯಣ ಭಾಗವತ ಪ್ರತಿಷ್ಠಾನ ಮತ್ತು ಯಕ್ಷಾಂತರಂಗ ಪೆರ್ಲ ಇದರ ಜಂಟಿ ಆಶ್ರಯದಲ್ಲಿ ಸೋಮವಾರ ಸಂಜೆ ಪೆರ್ಲದ ಬಲಿಪ ನಾರಾಯಣ ಭಾಗವತ ಸಭಾ ಭವನದಲ್ಲಿ ನಡೆದ ದಿ.ಮಾ.ಭ.ಪೆರ್ಲ ಅವರ ಎರಡನೇ ಪುಣ್ಯತಿಥಿ ಹಾಗೂ ಸಂಸ್ಮರಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿ ಅವರು ಮಾತನಾಡಿದರು.
ಗಡಿನಾಡಿನ ಪೆರ್ಲ ಪರಿಸರ ಕಲೆ, ಸಾಂಸ್ಕøತಿಕತೆಯ ದಟ್ಟವಾದ ಪ್ರಭಾವ ಪಡೆದ ವಿಶಿಷ್ಟ ಪ್ರದೇಶ. ಸಾಧಕ ಮಹನೀಯರ ದೊಡ್ಡ ದಂಡು ಇಲ್ಲಿಯ ಜನಜೀವನದ ಸಮೃದ್ದತೆಗೆ ದೊಡ್ಡ ಕೊಡುಗೆ ನೀಡಿದೆ. ಇಂದಿನ ಮಡುಗಟ್ಟಿದ ಸಮಾಜದ ಏಕತೆ, ಸಮೃದ್ದತೆಯ ಮನೋಸ್ಥಿತಿ ನಿರ್ಮಾಣಕ್ಕೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಕೈಜೋಡಿಸಬೇಕು. ಕಲೆ, ಸಾಹಿತ್ಯಗಳಿಗೆ ಅಂತಹ ಶಕ್ತಿ ಇದೆ ಎಂದು ಶ್ರೀಗಳು ತಿಳಿಸಿದರು.
ಸಾಮಾಜಿಕ, ಸಾಂಸ್ಕøತಿಕ ಮುಖಂಡ ರಾಜಾರಾಮ ಪೆರ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾ.ಭ. ಪೆರ್ಲ ದಂಪತಿಗಳು ಜೊತೆಯಾಗಿ ಕಟ್ಟಿದ ಜ್ಞಾನ ಪರಂಪರೆ ಮುಂದುವರಿಯಬೇಕು. ಸಮಾಜದಲ್ಲಿ ಆರ್ತರನ್ನು ಗುರುತಿಸಿ ಅವರನ್ನು ಕೈನೀಡಿ ಮೇಲೆತ್ತುವ ಅವರ ಗುಣಗಳು ಎಲ್ಲರಿಗೂ ಪ್ರೇರಕವಾದದ್ದು. ಮಿತಭಾಷಿಯಾಗಿ ಅವರು ನೀಡಿದ ಕೊಡುಗೆಯನ್ನು ಪುನರವಲೋಕನ ನಡೆಸುವ ಮೂಲಕ ನಮ್ಮನ್ನು ನಾವು ತಿದ್ದಿಕೊಳ್ಳುವ, ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಸನ್ಮನಸ್ಸು ಮೂಡಿಬರಬೇಕು ಎಂದು ತಿಳಿಸಿದರು.
ಪೆರ್ಲ ಸತ್ಯನಾರಾಯಣ ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಉದ್ಯಮಿ ಶ್ರೀರಾಮ ಭಟ್ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಮಾ.ಭ. ಪೆರ್ಲ ಅವರ ಒಡನಾಡಿ ಕೋಟೆ ರೆಂಜತಮೂಲೆ ವಿಶ್ವನಾಥ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಉದಯಶಂಕರ ಭಟ್ ಅಮೈ ಸ್ವಾಗತಿಸಿ, ಡಾ.ಸತೀಶ ಪುಣ್ಚಿತ್ತಾಯ ಪೆರ್ಲ ಅಭಿನಂದನಾ ಭಾಷಣಗೈದು ವಂದಿಸಿದರು. ವೀ.ಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀಧಾಮ ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನ ಪ್ರದರ್ಶನ ನಡೆಯಿತು.