ಬದಿಯಡ್ಕ: ಕೃಷಿಕರು ಒಗ್ಗಟ್ಟಿನಿಂದ ಮುಂದುವರಿದರೆ ನಾಡು ಸಮೃದ್ಧಿಯನ್ನು ಕಾಣಬಹುದು. ತಮ್ಮ ನೀರಿನ ಸೌಕರ್ಯಕ್ಕಾಗಿ ಜೊತೆಯಲ್ಲಿ ಅಣೆಕಟ್ಟನ್ನು ಕಟ್ಟುತ್ತಿರುವುದು ಸಂತಸದ ವಿಚಾರವಾಗಿದ್ದು ಇತರರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಕೆ ಡಿ ಪಿ ಕಾಸರಗೋಡು ಇದರ ವಿಶೇಷ ಅಧಿಕಾರಿ ಇ.ಪಿ ರಾಜ್ ಮೋಹನ್ ಹೇಳಿದರು.
ಕುಂಬ್ಡಾಜೆ ಗ್ರಾಮಸೇವಾಸಂಘ ಗ್ರಂಥಾಲಯ ಏತಡ್ಕ ಹಾಗೂ ಸರಣಿ ಕಟ್ಟಗಳು ಏತಡ್ಕ ಇದರ ಜಂಟಿ ಆಶ್ರಯದಲ್ಲಿ ಏತಡ್ಕ ವೈ.ಕೆ. ಗಣಪತಿ ಭಟ್ ಅವರ ಮನೆಯಲ್ಲಿ ನಡೆದ ಕಟ್ಟಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಜಲತಜ್ಞ ಶ್ರೀಪಡ್ರೆ ಮಾತನಾಡಿ, ಕಟ್ಟವಿಲ್ಲದ ಏತಡ್ಕವನ್ನು ಊಹಿಸಲೂ ಅಸಾಧ್ಯ ಎಂದು ಕಟ್ಟ ಕಟ್ಟುವ ಉದ್ದೇಶ ಹಾಗೂ ಅದರ ಪ್ರಯೋಜನಗಳನ್ನು ಸವಿವರವಾಗಿ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್ ನಡುಮನೆ ಹಾಗೂ ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಶರ್ಮ ಜಿ, ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಇ ಜನಾರ್ದನನ್ ಶುಭ ಹಾರೈಸಿದರು. ವೈ.ವಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಇ.ಪಿ ರಾಜಮೋಹನ್ ಅವರನ್ನು ಸ್ಮರಣಿಕೆಯನ್ನಿತ್ತು ಶಾಲುಹೊದಿಸಿ ಸನ್ಮಾನಿಸಲಾಯಿತು. ಗ್ರಂಥಾಲಯದ ಸದಸ್ಯರು, ಸರಣಿ ಕಟ್ಟಗಳ ಸದಸ್ಯರು, ಊರಿನ ಹಿರಿಯರು ಪಾಲ್ಗೊಂಡಿದ್ದರು. ಮಾಲತಿ ಜಿ.ಭಟ್ ಪ್ರಾರ್ಥನೆ ಹಾಡಿದರು. ಸರಣಿ ಕಟ್ಟಗಳ ಸಮಿತಿ ಅಧ್ಯಕ್ಷ ಡಾ ವೈ. ಎಚ್ ಪ್ರಕಾಶ್ ಸ್ವಾಗತಿಸಿ, ಕೆ. ಸುಬ್ರಹ್ಮಣ್ಯ ಭಟ್ ವಂದಿಸಿದರು. ಡಾ ವೇಣುಗೋಪಾಲ್ ಕೆ. ನಿರೂಪಿಸಿದರು.