ಪತ್ತನಂತಿಟ್ಟ: ಶಬರಿಮಲೆ ದೇಗುಲ ದರ್ಶನಕ್ಕೆ ವಿಧಿಸಲಾಗಿರುವ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಕೋರಿದೆ. ತುಪ್ಪಾಭಿಷೇಕ ಮತ್ತು ಸನ್ನಿಧಾನದಲ್ಲಿ ಪ್ರದಕ್ಷಿಣೆ ಬರಲು ಅವಕಾಶ ನೀಡಬೇಕೆಂದು ದೇವಸ್ವಂ ಮಂಡಳಿ ಆಗ್ರಹಿಸುತ್ತಿದೆ. ದೇವಸ್ವಂ ಸಚಿವರ ಅಧ್ಯಕ್ಷತೆಯಲ್ಲಿ ಪಂಪಾದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ರಿಯಾಯಿತಿಗಳ ಕುರಿತು ಚರ್ಚಿಸಲಾಯಿತು.
ಮಂಡಲ-ಮಕರ ಬೆಳಕು ಯಾತ್ರೆಗೆ ಶಬರಿಮಲೆ ಸನ್ನಿಧಿ ತೆರೆದುಕೊಂಡ ಬಳಿಕ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಸಭೆ ಇದಾಗಿದೆ. ಸನ್ನಿಧಾನದಲ್ಲಿನ ಪರಿಸ್ಥಿತಿಯನ್ನು ಒಂದು ವಾರದ ಅವಧಿಯ ಅವಲೋಕನದ ನಂತರವೇ ನಿರ್ಬಂಧಗಳ ಸಡಿಲಿಕೆಯನ್ನು ಪ್ರಕಟಿಸಲಾಗುವುದು. ಶಬರಿಮಲೆಯ ಪ್ರಮುಖ ಆಚರಣೆಗಳಲ್ಲಿ ಒಂದಾದ ತುಪ್ಪಾಭಿಷೇಕಕ್ಕೆ ಅನುಮತಿ ನೀಡಬೇಕೆಂಬ ಒತ್ತಾಯ ಪರಿಶೀಲನಾ ಸಭೆಯಲ್ಲಿ ಬಲವಾಗಿ ಪ್ರಸ್ತಾಪವಾಯಿತು.
ಹಿಂದಿನಂತೆ ಈ ಬಾರಿಯೂ ಅಭಿಷೇಕ ಹಾಗೂ ಭಕ್ತರು ತಂದ ತುಪ್ಪವನ್ನು ಪ್ರಸಾದ ರೂಪದಲ್ಲಿ ಮರಳಿ ಕೊಡುವ ಸೌಲಭ್ಯವನ್ನು ಮತ್ತೆ ಆರಂಭಿಸಲು ದೇವಸ್ವಂ ಮಂಡಳಿ ಮುಂದಾಗಿದೆ. ಗರ್ಭಗುಡಿಯ ಮುಂಭಾಗ ಭಕ್ತರಿಗೆ ಹೆಚ್ಚುಕಾಲ ಕಳೆಯಲು ಅನುಮತಿ ಇಲ್ಲದ ಕಾರಣ ಯಾತ್ರಾರ್ಥಿಗಳು ಶೀಘ್ರ ಬೆಟ್ಟದಿಂದ ಕೆಳಗೆ ಇಳಿಯುವ ಕ್ರಮ ಈಗಿನದು. ಇಷ್ಟು ನಿಗದಿತ ಅವಧಿಯೊಳಗೆ ಬೆಟ್ಟ ಹತ್ತುವುದು ಮತ್ತು ಇಳಿಯುವುದು ಭಕ್ತರಿಗೆ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ದೇವಸ್ವಂ ಮಂಡಳಿ ಹೇಳಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿನಾಯಿತಿ ಘೋಷಿಸಲು ಸಿದ್ಧತೆ ನಡೆಸಿದೆ.