ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಕಾರಣ ಜನರು ಮನೆಯಿಂದ ಹೊರ ಹೋಗುವುದನ್ನು ತಪ್ಪಿಸುವಂತೆ ಕೇಂದ್ರ ಮಾಲಿನ್ಯ ನಿಗಾ ಸಂಸ್ಥೆ ಶುಕ್ರವಾರ ಸಲಹೆ ನೀಡಿದೆ ಮತ್ತು ವಾಹನ ಬಳಕೆಯನ್ನು ಕನಿಷ್ಠ ಶೇಕಡಾ 30 ರಷ್ಟು ಕಡಿಮೆಗೊಳಿಸುವಂತೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ನಿರ್ದೇಶನ ನೀಡಿದೆ.
ಹಿಂದಿನ ದಿನ ನಡೆದ ಪರಿಶೀಲನಾ ಸಭೆಯಲ್ಲಿ, ನವೆಂಬರ್ 18 ರವರೆಗೆ ಕಡಿಮೆ ಗಾಳಿ ಮತ್ತು ಶಾಂತ ವಾತಾವರಣದ ದೃಷ್ಟಿಯಿಂದ ಮಾಲಿನ್ಯಕಾರಕಗಳ ಪ್ರಸರಣಕ್ಕೆ ಹವಾಮಾನ ಪರಿಸ್ಥಿತಿ ಹೆಚ್ಚು ಪ್ರತಿಕೂಲವಾಗಿರುತ್ತದೆ ಎಂಬುದನ್ನು ಗಮನಿಸಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(CPCB) ಆದೇಶವೊಂದರಲ್ಲಿ ಹೇಳಿದೆ.
ದೆಹಲಿಯಲ್ಲಿ ಕಳೆದ 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(AQI) 471 ದಾಖಲಾಗಿದೆ. ಇದು ಈ ಋತುವಿನಲ್ಲಿ ಅತ್ಯಂತ ಕೆಟ್ಟ ವಾಯು ಆಗಿದೆ. ಗುರುವಾರ 411 ರಷ್ಟು ದಾಖಲಾಗಿತ್ತು. ಫರಿದಾಬಾದ್ (460), ಗಾಜಿಯಾಬಾದ್ (486), ಗ್ರೇಟರ್ ನೋಯ್ಡಾ (478), ಗುರುಗ್ರಾಮ್ (448) ಮತ್ತು ನೋಯ್ಡಾ(488)ದಲ್ಲಿ ಸಂಜೆ 4 ಗಂಟೆಗೆ ತೀವ್ರ ವಾಯು ಗುಣಮಟ್ಟವನ್ನು ದಾಖಲಿಸಿದೆ.
ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮತ್ತು ಇತರ ಸಂಸ್ಥೆಗಳು ವಾಹನದ ಬಳಕೆಯನ್ನು ಕನಿಷ್ಠ ಶೇಕಡಾ 30 ರಷ್ಟು ಕಡಿಮೆ ಮಾಡಲು ಸಲಹೆ ನೀಡಲಾಗಿದೆ. ಜನರು ಮನೆಯಿಂದ ಕೆಲಸ ಮಾಡುವ ಮೂಲಕ, ಕಾರ್-ಪೂಲಿಂಗ್ ಇತ್ಯಾದಿಗಳ ಮೂಲಕ ಹೊರಾಂಗಣ ಚಟುವಟಿಕೆಗಳನ್ನು ಮಿತಿಗೊಳಿಸಬೇಕು ಸಿಪಿಸಿಬಿ ಸಲಹೆ ನೀಡಿದೆ.