ತಿರುವನಂತಪುರಂ: ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿಯ ಫೋಟೋ ತೆಗೆದುಹಾಕುವಂತೆ ಕೋರುವುದು ಒಂದು ಅಪಾಯಕಾರಿ ಪ್ರಸ್ತಾವನೆಯಾಗಿದೆ ಎಂದು ಕೇರಳ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ಮಂಗಳವಾರ ಪ್ರಕರಣವೊಂದರ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ್ದಾರೆ ಎಂದು livelaw.in ವರದಿ ಮಾಡಿದೆ.
ಕೋವಿಡ್-19 ಲಸಿಕೆ ಪ್ರಮಾಣಪತ್ರದ ಕೆಳ ಭಾಗದಲ್ಲಿ ಪ್ರಧಾನಿಯ ಚಿತ್ರವನ್ನು ತೆಗೆದುಹಾಕಬೇಕು ಹಾಗೂ ಅದು ತನ್ನ ಖಾಸಗಿ ಸ್ಥಳ ಮತ್ತು ಅದರ ಮೇಲೆ ತನಗೆ ಹಕ್ಕಿದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಭಾರತದಲ್ಲಿ ಕರೆನ್ಸಿ ನೋಟುಗಳಲ್ಲಿಯೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರುವುದನ್ನು ಬೆಟ್ಟು ಮಾಡಿದೆ.
'ನಾಳೆ ಬೇರೆ ಯಾರಾದರೂ ಬಂದು ತಮಗೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಬೇಡ ಅದನ್ನು ತೆಗೆದು ಹಾಕಬೇಕೆಂದು ಕೇಳಬಹುದು,'' ಎಂದು ಜಸ್ಟಿಸ್ ಎನ್ ನಗರೇಶ್ ಪ್ರತಿಕ್ರಿಯಿಸಿದರು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಅಜಿತ್ ರಾಯ್, ಗಾಂಧೀಜಿ ಅವರ ಭಾವಚಿತ್ರ ಕರೆನ್ಸಿ ನೋಟುಗಳಲ್ಲಿ ಆರ್‍ಬಿಐ ಸೂಚನೆಯ ಪ್ರಕಾರವಿದೆ ಆದರೆ ಪ್ರಧಾನಿ ಮೋದಿಯ ಫೋಟೋ ಲಸಿಕೆ ಪ್ರಮಾಣಪತ್ರಗಳಲ್ಲಿ ಯಾವುದೇ ಶಾಸನಬದ್ಧ ನಿಬಂಧನೆಯಿಂದಾಗಿ ಇಲ್ಲ ಎಂದು ಹೇಳಿದರು.
ಭಾರತ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್, ತಮಗೆ ಹೇಳಿಕೆ ಸಲ್ಲಿಸಲು ಸಮಯಾವಕಾಶ ಕೋರಿದ ನಂತರ ಮುಂದಿನ ವಿಚಾರಣೆಯನ್ನು ನವೆಂಬರ್ 23ಕ್ಕೆ ನಿಗದಿಪಡಿಸಲಾಗಿದೆ.