ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೂ ಹೊಸ ಕೋವಿಡ್-19 ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸೂಖ್ ಮಾಂಡವೀಯಾ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಈ ಮಾಹಿತಿ ನೀಡಿದ ಸಚಿವರು, ಕಳೆದ ದಕ್ಷಿಣ ಆಫ್ರಿಯಾದಲ್ಲಿ ಮೊದಲ ಬಾರಿಗೆ ಒಮಿಕ್ರಾನ್ ಪತ್ತೆಯಾಗಿದ್ದು, ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ ಎಂದರು.
ಒಮಿಕ್ರಾನ್ ಅಥವಾ ಕೋವಿಡ್-19 ನ ಇತರ ಯಾವುದೇ ರೂಪಾಂತರದಿಂದ ದೇಶದ ಹೆಚ್ಚಿನ ಸಂಖ್ಯೆಯ ಜನರನ್ನು ರಕ್ಷಿಸಲ್ಪಡುವ ಸಾಧ್ಯತೆಯಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಹೆಸರಾಂತ ವೈರಾಲಜಿಸ್ಟ್ ಡಾ. ಶಾಹೀದ್ ಜಮೀಲ್ ಹೇಳಿದ್ದಾರೆ. ಜನರು ಎಚ್ಚರಿಕೆ ವಹಿಸಬೇಕಾಗಿದೆ, ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೊಟ್ಸ್ವಾನಾದಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆ ಮತ್ತು ಪರೀಕ್ಷೆ ನಡೆಸುವಂತೆ ನವೆಂಬರ್ 25 ರಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.