ನವದೆಹಲಿ: ಭಾರತದಲ್ಲಿರುವ ಅಫ್ಘಾನ್ ಅಲ್ಪಸಂಖ್ಯಾತರು ತುರ್ತು ಸಭೆ ನಡೆಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂ ಮತ್ತು ಸಿಖ್ಖರಿಗೆ ಇ-ವೀಸಾಗಳನ್ನು ನೀಡಿ, ಅವರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಡುವಂತೆ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.ಅಫ್ಘಾನಿಸ್ತಾನದ ಮಾಜಿ ಸಂಸದ ನರಿಂದರ್ ಸಿಂಗ್ ಖಾಲ್ಸಾ, ಅವರ ಸಹೋದರ ಮತ್ತು ಮಾಜಿ ಅಧ್ಯಕ್ಷ ಘನಿ ಅವರಿಗೆ ಸಲಹೆಗಾರನಾಗಿದ್ದ ಸಂದಲ್ ಸಿಂಗ್ ಖಾಲ್ಸಾ ಮತ್ತು ಅನೇಕ ಗುರುದ್ವಾರಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಎರಡು ತಿಂಗಳ ಅವಧಿಗೆ 216 ಅಫ್ಘಾನ್ ನಾಗರಿಕರನ್ನು ಸ್ಥಳಾಂತರಿಸಲು ಇ-ವೀಸಾಗಳನ್ನು ನೀಡುವಂತೆ ಹಾಗೂ ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರದ ಇತರ ಆರು ಜನರಿಗೆ ಅನುಕೂಲ ಕಲ್ಪಿಸುವಂತೆ ಭಾರತ ಸರ್ಕಾರದ ಬಳಿ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ವಿನಂತಿಸಿದ್ದಾರೆ.
ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದಕರ ಸುರಕ್ಷಿತ ತಾಣ ಅಥವಾ ಸ್ವರ್ಗವಾಗಿ ಮಾಡಬಾರದು ಎಂದು ಭಾರತ ಮತ್ತು ಅಮೆರಿಕ ತಾಲಿಬಾನ್‌ಗೆ ಒತ್ತಾಯಿಸಿದೆ.
ಅಮೆರಿಕ-ಭಾರತ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಅಡಿಯಲ್ಲಿ ಭಯೋತ್ಪಾದನಾ ನಿಗ್ರಹದ ಕುರಿತು ಜಂಟಿ ಸಂವಾದ ನಡೆಸಿದೆ. ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ದಾಳಿ ಮಾಡಲು, ಆಶ್ರಯ ನೀಡಲು, ಭಯೋತ್ಪಾದಕರಿಗೆ ತರಬೇತಿ ನೀಡಲು, ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಅಥವಾ ಹಣಕಾಸು ಒದಗಿಸಲು ಎಂದಿಗೂ ಬಳಸಬಾರದು ಎಂದು ತಾಲಿಬಾನ್‌ಗೆ ಭಾರತ ಹಾಗೂ ಅಮೆರಿಕ ಕರೆ ನೀಡಿದೆ.
ಕಾನೂನು ಜಾರಿ, ಮಾಹಿತಿ ಹಂಚಿಕೆ, ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಭಯೋತ್ಪಾದನಾ ನಿಗ್ರಹ ಸವಾಲುಗಳ ಮೇಲೆ ಕಾರ್ಯತಂತ್ರದ ಒಮ್ಮುಖದ ಮೇಲೆ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಅಮೆರಿಕ ಮತ್ತು ಭಾರತ ಮುಂದಾಗಿದೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜನರು ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲಲು ನಾವು ಬದ್ಧರಿದ್ದೇವೆ ಎಂದು ಅಮೆರಿಕ ತಿಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಲ್-ಖೈದಾ, ಐಸಿಸ್, ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮತ್ತು ಜೈಷ್-ಎ-ಮೊಹಮ್ಮದ್ (ಜೆಮ್) ಸೇರಿದಂತೆ ಎಲ್ಲಾ ಭಯೋತ್ಪಾದನಾ ಗುಂಪುಗಳ ವಿರುದ್ಧ ಸಂಘಟಿತ ಕ್ರಮಕ್ಕೆ ಕರೆ ನೀಡಲಾಗಿದೆ.
ತಾಲಿಬಾನ್ ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ನೆಲೆ ಒದಗಿಸುವುದಿಲ್ಲ ಎಂಬುದನ್ನು ಖಚಿತ ಪಡಿಸಬೇಕು ಎಂದು ಅಮೆರಿಕಾ ಮತ್ತು ಭಾರತ ಒತ್ತಾಯಿಸಿವೆ. ಪ್ರಮುಖವಾಗಿ ತಾಲಿಬಾನ್ ತನ್ನ ನೆಲವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿ ಮಾಡಬಾರದು, ಅಲ್ಲಿಂದ ಬೇರೆ ಯಾವುದೇ ದೇಶದ ಮೇಲಿನ ದಾಳಿಗೆ ವೇದಿಕೆ ಕಲ್ಪಿಸಬಾರದು. ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಮತ್ತು ಅಕ್ರಮ ಶಸ್ತ್ರಾಸ್ತ್ರ ಒದಗಿಸಬಾರದು ಎಂದು ಭಾರತ ಮತ್ತು ಅಮೆರಿಕ ಜಂಟಿಯಾಗಿ ಒತ್ತಾಯಿಸಿವೆ.
ಭಾರತ ಮತ್ತು ಅಮೆರಿಕ 2017ರ ವಿಶ್ವಸಂಸ್ಥೆಯ ನಿರ್ಣಯದಂತೆ ಅಂತಾರಾಷ್ಟ್ರೀಯ ಪ್ರವಾಸಿ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕಾರ್ಯತಂತ್ರಗಳ ಜಾರಿಗೆ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು, ತಾಲಿಬಾನ್ ಸರ್ಕಾರವಿರುವ ಅಫ್ಘಾನಿಸ್ತಾನಕ್ಕೆ ಅಮೆರಿಕ ಸುಮಾರು 144 ಮಿಲಿಯನ್ ಅಮೆರಿಕನ್ ಡಾಲರ್ ನೀಡಲು ನಿರ್ಧರಿಸಿದೆ. ಮಾನವೀಯತೆಯ ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.
ಅಮೆರಿಕ ನೀಡುವ ಪರಿಹಾರವು ವಿವಿಧೆಡೆ ನಿರಾಶ್ರಿತರಾಗಿರುವ ಅಫ್ಘಾನ್ ಜನರಿಗೆ ಸಹಾಯ ಮಾಡಲಿದೆ. ಇದುವರೆಗೆ ಸುಮಾರು 474 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಅಮೆರಿಕ ಅಫ್ಘಾನಿಸ್ತಾನಕ್ಕೆ ನೆರವು ನೀಡುವುದಾಗಿ ಘೋಷಿಸಿದೆ.