ಗಾಂಧಿನಗರ: ಸೋಮವಾರ ಗುಜರಾತಿನ ಹೆಸರಾಂತ ಸಬರಮತಿ ಆಶ್ರಮಕ್ಕೆ ಭೇಟಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಚರಕದಿಂದ ನೂಲು ನೇಯಲು ಯತ್ನಿಸಿದ್ದಾಗಿ ಆಶ್ರಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿರುವ 'ಅಂತಿಮ್ ದಿ ಫೈನಲ್ ಟ್ರುತ್ ' ಚಿತ್ರದ ಪ್ರಚಾರಕ್ಕಾಗಿ ಸಲ್ಮಾನ್ ಖಾನ್ ಅಹಮದಾಬಾದ್ ಗೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಚಿತ್ರ ಬಿಡುಗಡೆಯಾಗಿದ್ದ ಮಲ್ಟಿಪ್ಲೆಕ್ಸ್ ಭೇಟಿಗೂ ಮುನ್ನ 1917 ಮತ್ತು 1930ರ ನಡುವೆ ಮಹಾತ್ಮ ಗಾಂಧಿ ಅವರು ವಾಸಿಸುತ್ತಿದ್ದ ಸಬರಮತಿ ಆಶ್ರಮಕ್ಕೆ ಸಲ್ಮಾನ್ ಖಾನ್ ಭೇಟಿ ನೀಡಿದರು ಎಂದು ಸಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್ ನ ಐಟಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ವಿರಾಟ್ ಕೊಠಾರಿ ತಿಳಿಸಿದ್ದಾರೆ.
ಇದು ಅವರ ಸಿನಿಮಾ ಪ್ರಚಾರದ ಭಾಗವಾಗಿರಲಿಲ್ಲ. ಸಂಪೂರ್ಣವಾದ ವೈಯಕ್ತಿಕ ಭೇಟಿಯಾಗಿತ್ತು.ಈ ವೇಳೆ ಎಲ್ಲಾ ಶಿಷ್ಟಾಚಾರ ಹಾಗೂ ನಿಯಮಗಳನ್ನು ಪಾಲಿಸಿದರು. ಆಶ್ರಮದ ಮಹತ್ವವನ್ನು ಅವರಿಗೆ ವಿವರಿಸಿದೆ, ಆಶ್ರಮದ ಒಳಗಿನ ಗಾಂಧೀಜಿ ಅವರ ಕೊಠಡಿಗೂ ಸಲ್ಮಾನ್ ಖಾನ್ ಭೇಟಿ ನೀಡಿದರು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಆಶ್ರಮಕ್ಕೆ ಭೇಟಿ ನೀಡಿದ್ದ ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರ ನಿರ್ದೇಶಕ ಮಹೇಶ್ ಮಂಜ್ರೇಕರ್ ಜೊತೆಯಲ್ಲಿದ್ದರು. ಚರಕದಿಂದ ಸರಿಯಾಗಿ ನೂಲು ತೆಗೆಯಲು ಸಾಧ್ಯವಾಗದಿದ್ದಾಗ ಮತ್ತೆ ಬರುವುದಾಗಿ ಅಲ್ಲಿನ ಮಾರ್ಗದರ್ಶಕರಿಗೆ ಸಲ್ಮಾನ್ ಖಾನ್ ಹೇಳಿದ್ದಾಗಿ ಮತ್ತೊಬ್ಬರು ತಿಳಿಸಿದರು. ಈ ಸ್ಥಳಕ್ಕೆ ಭೇಟಿ ನನ್ನ ಸೌಭಾಗ್ಯವಾಗಿದೆ. ಭವಿಷ್ಯದಲ್ಲಿ "ಇನ್ನಷ್ಟು ಕಲಿಯಲು ಮತ್ತೊಮ್ಮೆ ಆಶ್ರಮಕ್ಕೆ ಭೇಟಿ ನೀಡುತ್ತೇನೆ ಎಂಬ ವಿಶ್ವಾಸದಲ್ಲಿರುವುದಾಗಿ ಸಂದರ್ಶಕರ ಪುಸ್ತಕದಲ್ಲಿ ಸಲ್ಮಾನ್ ಖಾನ್ ಬರೆದಿದ್ದಾರೆ.