HEALTH TIPS

ಜಾನುವಾರುಗಳಿಗೆ ಚಾಕಲೇಟ್ ಕೇಕ್: ವಿನೂತನ ಪ್ರಯೋಗದಿಂದ ಹಾಲಿನ ಇಳುವರಿ ಹೆಚ್ಚಳದ ಭರವಸೆ

             ಭೋಪಾಲ್: ಮಕ್ಕಳು ಆಸೆ ಪಟ್ಟು ಚಾಕಲೇಟ್ ಗಾಗಿ ತಿನ್ನುವುದು ಸಹಜ. ಹದಿಹರೆಯದ ಕಾಲೇಜು ತರುಣಿಯರೂ ಉಡುಗೊರೆಯಾಗಿ ಚಾಕಲೇಟನ್ನು ಅಪೇಕ್ಷಿಸುವುದೂ ಸಹಜವೇ. ಮುಂದಿನ ದಿನಗಳಲ್ಲಿ ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳೂ ಚಾಕಲೇಟಿಗಾಗಿ ಬೇಡಿಕೆ ಇಡುವ ಕಾಲವೂ ಸನ್ನಿಹಿತವಾಗಿದೆ. ಅದಕ್ಕೆ ಮುನ್ನುಡಿ ಬರೆದಿದೆ ಮಧ್ಯಪ್ರದೇಶದ, ಜಬಲ್ಪುರದಲ್ಲಿರುವ ನಾನಾಜಿ ಪಶುವೈದ್ಯಕೀಯ ಕೇಂದ್ರದ (NDVSU) ಸಂಶೋಧಕರು. ಅವರು ಜಾನುವಾರುಗಳಿಗಾಗಿ ಚಾಕಲೇಟ್ ಕೇಕ್(ಗಟ್ಟಿ) ಗಳನ್ನು ತಯಾರಿಸುವಲ್ಲಿ ಸಫಲರಾಗಿದ್ದಾರೆ.  

           ಹೈನುಗಾರಿಕೆಯಲ್ಲಿ ತೊಡಗಿರುವ ಬಡ ರೈತರಿಗೆ ಈ ಚಾಕಲೇಟ್ ಗಟ್ಟಿಗಳು ವರದಾನವಾಗಬಲ್ಲುದು ಎಂದು ಸಂಶೋಧಕರು ತಿಳಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ಜಾನುವಾರುಗಳ ಚಾಕಲೇಟ್ ಅಭಿವೃದ್ಧಿಯ ಉದ್ದೇಶವೇ ಅದು. 

            ಹಾಲಿನ ಇಳುವರಿ ಹೆಚ್ಚಿಸಬೇಕೆಂದರೆ ಜಾನುವಾರುಗಳಿಗೆ ಚೆನ್ನಾಗಿ ಮೇವು ಹಾಕಬೇಕು. ಬಡ ರೈತರು ಮೇವು ಒದಗಿಸಲು ಸಾಧ್ಯವಾಗದೆ ಜಾನುವಾರುಗಳಿಂದ ಹಾಲಿನ ಇಳುವರಿ ಪಡೆಯುವಲ್ಲಿ ಹಿಂದೆ ಬೀಳುತ್ತಿರುವುದು ಸಂಶೋಧಕರ ಗಮನಕ್ಕೆ ಬಂದಿತ್ತು. 

              ಬಡ ರೈತರಿಗೆ ನೆರವಾಗುವ ಸಲುವಾಗಿ ಜಾನುವಾರುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ನಾಲಗೆಗೆ ರುಚಿಸುವ ಪದಾರ್ಥಗಳನ್ನು ಸೇರಿಸಿ ಸಂಶೋಧಕರು ಚಾಕಲೇಟ್ ಕೇಕ್ ತಯಾರಿಸಿದ್ದಾರೆ. ಒಂದೊಂದು ಗಟ್ಟಿಯೂ 2.5- 3 ಕೆ.ಜಿ ತೂಕವಿದೆ. 

             ಈ ಉತ್ಪನ್ನ ಐ ಎಸ್ ಒ ಮತ್ತು ಬಿಐಎಸ್ ಸಂಸ್ಥೆಗಳಿಂದ ಪ್ರಮಾಣೀಕೃತಗೊಂಡಿದೆ. ಈ ಚಾಕಲೇಟ್ ಕೇಕ್ ಗೆ ನರ್ಮದಾ ವಿಟಮಿನ್ ಲಿಕ್ ಎಂದು ನಾಮಕರಣ ಮಾಡಲಾಗಿದೆ. ಈ ಚಾಕಲೇಟು ಸೇವನೆಯಿಂದ ಜಾನುವಾರುಗಳು ಶೇ.15- 20 ಪ್ರತಿಶತ ಹೆಚ್ಚಿನ ಪ್ರಮಾಣದ ಹಾಲನ್ನು ನೀಡುವ ಭರವಸೆಯನ್ನು ಸಂಶೋಧಕರು ನೀಡಿದ್ದಾರೆ. ಈ ಉತ್ಪನ್ನ ಕೇವಲ ಜಾನುವಾರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಮ್ಮೆ, ಆಡು, ಕುರಿ, ಹಂದಿಗಳ ಪೋಷಣೆಗೂ ನೆರವಾಗುವುದರಿಂದ ಅವುಗಳಿಗೂ ನೀಡಬಹುದಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries