ಕೊಚ್ಚಿ: ಚುನಾವಣಾ ಲಂಚ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ರಿಗೆ ತಿರುಗೇಟು ಉಂಟಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಪರೀಕ್ಷೆ ನಡೆಸಬೇಕೆಂಬ ಬೇಡಿಕೆಯನ್ನು ಬತ್ತೇರಿ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಇದರೊಂದಿಗೆ ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿಯೇ ಧ್ವನಿ ಮಾದರಿ ಪರೀಕ್ಷೆ ನಡೆಸಲಾಗುವುದು ಎಂದು ತನಿಖಾ ತಂಡ ಮಾಹಿತಿ ನೀಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಲು ಸಿಕೆ ಜಾನು ಅವರಿಗೆ 35 ಲಕ್ಷ ರೂಪಾಯಿ ಲಂಚ ನೀಡಿದ್ದರು ಎಂಬುದು ಸುರೇಂದ್ರನ್ ವಿರುದ್ಧದ ಪ್ರಕರಣವಾಗಿತ್ತು. ಪ್ರಕರಣದಲ್ಲಿ ಆರೋಪಿಯಾಗಿರುವ ಸುರೇಂದ್ರನ್ ಅವರ ಧ್ವನಿ ಮಾದರಿಯನ್ನು ತನಿಖಾಧಿಕಾರಿಗಳು ಈ ಹಿಂದೆ ಸಂಗ್ರಹಿಸಿದ್ದರು. ಪ್ರಕರಣದಲ್ಲಿ ಬಹಿರಂಗ ಪಡಿಸಿದ ಪ್ರಸೀತಾ ಅಳಿಕೋಡ್ ಅವರ ಧ್ವನಿಯನ್ನೂ ಪರಿಶೀಲಿಸಲಾಗುವುದು.