ನವದೆಹಲಿ: ಜಾರ್ಖಂಡ್‌ನ ಧನ್‌ಬಾದ್ ವಲಯದಲ್ಲಿ ರೈಲ್ವೆ ಹಳಿ ಮೇಲೆ ನಕ್ಸಲರು ಬಾಂಬ್ ಸ್ಫೋಟಿಸಿದ್ದು, ರೈಲ್ವೆ ಹಳಿಯ ಒಂದು ಭಾಗ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.
12.30 ರ ಸುಮಾರಿಗೆ ರಿಚುಗುಟಾ ಮತ್ತು ಡೆಮು ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಪಿಐ-ಮಾವೋವಾದಿ ಸ್ಕ್ವಾಡ್‌ನ ಸದಸ್ಯರು ಲತೇಹಾರ್‌ನಲ್ಲಿ ರೈಲು ಹಳಿಗಳನ್ನು ಸ್ಫೋಟಿಸಿದ್ದು, ಈ ಮೂಲಕ ಬರ್ಕಾಕಾನಾ-ಗರ್ಹ್ವಾ ರೈಲು ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪಲಾಮು ರೇಂಜ್‌ನ ಉಪ ಪೊಲೀಸ್ ಮಹಾನಿರೀಕ್ಷಕ ರಾಜ್ ಕುಮಾರ್ ಲಾಕ್ರಾ ಅವರು ಹೇಳಿದ್ದಾರೆ.
ನಿಷೇಧಿತ ಸಂಘಟನೆಯು ತನ್ನ ನಾಯಕ ಪ್ರಶಾಂತ್ ಬೋಸೆ ಅಲಿಯಾಸ್ ಕಿಶಾನ್ ದಾ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ನಿನ್ನೆಯಷ್ಟೇ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು.
ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಢ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 100ಕ್ಕೂ ಹೆಚ್ಚು ಕಡೆ ನಡೆದ ದಾಳಿ ಮತ್ತು ಬೆಂಕಿ ಹಚ್ಚುವ ಘಟನೆಗಳ ಹಿಂದೆ ಬೋಸ್ ಮಾಸ್ಟರ್ ಮೈಂಡ್ ಆಗಿದ್ದ. ಘಟನೆ ಬಳಿಕ ರೈಲ್ವೆ ಅಧಿಕಾರಿಗಳು ಹಳಿಗಳನ್ನು ಸರಿಪಡಿಸುತ್ತಿದ್ದಾರೆ ಎಂದು ಲಾಕ್ರಾ ಮಾಹಿತಿ ನೀಡಿದ್ದಾರೆ.
ರೈಲ್ವೇ ಹಳಿ ಸ್ಫೋಟಗೊಳಿಸಿದ ಘಟನೆ ಬಳಿಕ ಇದೀಗ ಮಧ್ಯ ಪೂರ್ವ ರೈಲ್ವೆಯ ಧನ್‌ಬಾದ್ ವಿಭಾಗ ವ್ಯಾಪ್ತಿಯ ಪಲಾಮು, ಗರ್ವಾ ಮತ್ತು ಲತೇಹರ್ ಜಿಲ್ಲೆಗಳ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟೆಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.
ರೈಲು ಹಳಿಗಳ ದುರಸ್ತಿಗಾಗಿ ಬರ್ಕಾಕಾನ ಮತ್ತು ಬರ್ವಾಡಿ ವಿಶೇಷ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಡುವೆ ಡೆಹ್ರಿ-ಒನ್ಸೋನ್-ಬರ್ವಾಡಿಹ್ ಮತ್ತು ಬರ್ವಾಡಿಹ್-ನೆಸುಬೊಗೊಮೊ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗಿದೆ. ಮೇದಿನಿನಗರದಿಂದ ರಾಂಚಿಗೆ ತೆರಳುವ ಪ್ರಯಾಣಿಕ ಬಸ್‌ಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.