ಮಂಗಳೂರು: ಸೋನಿ ಟಿವಿ ತನ್ನ ಪ್ರಖ್ಯಾತ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ 'ಮಿಡ್ ಬ್ರೈನ್ ಆಕ್ಟಿವೇಶನ್' ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಂಡಿದೆ. ಅದಕ್ಕೆ ಕಾರಣವಾಗಿದ್ದು ಮಂಗಳೂರು ಮೂಲದ ನರೇಂದ್ರ ನಾಯಕ್ ಎನ್ನುವುದು ಅಚ್ಚರಿಯ ಸಂಗತಿ.
ಮೆದುಳನ್ನು ವಿಶೇಷ ಅನುಭವಗಳಿಗೆ ಜಾಗೃತಗೊಳಿಸುವ ಅರ್ಥವನ್ನು ನೀಡುವ ಈ ಸಂಚಿಕೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಮಂಗಳೂರು ಮೂಲದ ವಿಚಾರವಾದಿ ನರೇಂದ್ರ ನಾಯಕ್ ಅವರು ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಓಪನ್ ಲೆಟರ್ ಬರೆದಿದ್ದರು.
ಅತೀಂದ್ರಿಯ ಶಕ್ತಿ ಕುರಿತಾಗಿ ಪ್ರಚಾರ ನೀಡುವುದರಿಂದ ಕಾಮನ್ ಸೆನ್ಸ್ ಗೆ ಅವಹೇಳನ ಮಾಡಿದಂತಾಗುತ್ತದೆ ಎಂದು ನರೇಂಡ್ರ ನಾಯಕ್ ಪತ್ರದಲ್ಲಿ ಹೇಳಿದ್ದರು. ನರೇಂದ್ರ ನಾಯಕ್ ಅವರು ಅಖಿಲ ಭಾರತ ವಿಚಾರವಾದಿಗಳ ಸಂಘದ ಅಧ್ಯಕ್ಷರಾಗಿದ್ದಾರೆ.
ಹಾಗೊಂದು ವೇಳೆ ಅತೀಂದ್ರಿಯ ಶಕ್ತಿ ನಿಜಕ್ಕೂ ಎಂದಿದಲ್ಲಿ ಅದೊಂದು ಅತ್ಯದ್ಭುತ ಆವಿಷ್ಕಾರವಾಗುತ್ತಿತ್ತು. ಅದಕ್ಕೆ ನೊಬೆಲ್ ಪ್ರಶಸ್ತಿ ಕೊಡುತ್ತಿದ್ದರು ಎಂದು ನಾಯಕ್ ತಿಳಿಸಿದ್ದರು.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಸಂಘಟಕರು ನರೇಂದ್ರ ನಾಯಕ್ ಅವರಿಗೆ ಮೇಲ್ ಮೂಲಕ ತಾವು ಆ ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.