ನವದೆಹಲಿ: ಚಾರ್‌ಧಾಮ್ ರಸ್ತೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಭಾರತ ಮತ್ತು ಚೀನಾ ಗಡಿ ಘರ್ಷಣೆಯನ್ನು ಉಲ್ಲೇಖಿಸಿದೆ (ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ). ಮರಗಳನ್ನು ಕಡಿದು ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆಗಾಗಿ ಮೊದಲ ಹಂತದ ಕಾಡು ಮತ್ತು ವನ್ಯಜೀವಿಗಳನ್ನು ತೆರವು ಗೊಳಿಸುವುದನ್ನು ಪ್ರಶ್ನಿಸಿ ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಕೇಂದ್ರದ ಪ್ರಸ್ತಾಪವನ್ನು ನ್ಯಾಯಾಲಯ ತಿಳಿಸಿದೆ. ರಸ್ತೆ ಅಗಲೀಕರಣ ಕೇವಲ ಪ್ರವಾಸೋದ್ಯ ಉದ್ದೇಶಕ್ಕಾಗಿ ಅಲ್ಲ ಬದಲಿಗೆ ಗಡಿ ರಕ್ಷಣೆಗೆ ಎನ್ನುವ ವಿಚಾರವನ್ನು ತಿಳಿಸಿದೆ. ಇದರಿಂದಾಗಿ ನ್ಯಾಯಾಲಯ ಪರಿಸರ ಕಾಳಜಿ ಮತ್ತು ರಾಷ್ಟ್ರದ ರಕ್ಷಣೆ ಪ್ರಕರಣಗಳಲ್ಲಿ ನ್ಯಾಯಾಲಯ ಎಷ್ಟರ ಮಟ್ಟಿಗೆ ಮಧ್ಯ ಪ್ರವೇಶಿಸಬಹುದು ಎಂದು ಕುರಿತು ಜಿಜ್ಞಾಸೆ ವ್ಯಕ್ತಪಡಿಸಿದೆ.
ಕೇಂದ್ರವು ರಸ್ತೆಗಳನ್ನು 10 ಮೀಟರ್‌ಗೆ ವಿಸ್ತರಿಸಲು ನ್ಯಾಯಾಲಯದ ಅನುಮೋದನೆಯನ್ನು ಕೋರಿತ್ತು. ಗರ್ವಾಲ್ ಹಿಮಾಲಯದ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ್ ನಾಲ್ಕು ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ಚಾರ್ ಧಾಮ್ ಹೆದ್ದಾರಿ ಯೋಜನೆಯು 899-ಕಿಮೀ ರಸ್ತೆಯನ್ನು ಹೊಂದಿದೆ, ಇದನ್ನು ಕೇಂದ್ರವು ಡೆಹ್ರಾಡೂನ್ ಬಳಿ ವಿಸ್ತರಿಸಲು ಬಯಸಿದೆ. ಆದರೆ ರಸ್ತೆಗಳು ಒಟ್ಟು 5 ಮೀಟರ್‌ಗಿಂತ ಅಗಲವಾಗಿರಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು.
ಆದರೆ ಕೇಂದ್ರವು ಇನ್ನೊಂದು ಬದಿಯಲ್ಲಿ ವಿರೋಧಿ ಪಡೆಗಳ ದಾಳಿ, ರಾಷ್ಟ್ರದ ರಕ್ಷಣೆ ಬಗ್ಗೆ ಉಲ್ಲೇಖಿಸಿದೆ. ಗಡಿ ದಾಳಿ ಸಂದರ್ಭಗಳಲ್ಲಿ ಅಗಲವಾದ ರಸ್ತೆಗಳು ಪ್ರತಿದಾಳಿಗೆ ಉಪಯುಕ್ತವಾಗಿವೆ. ಆದ್ದರಿಂದ ಫಿರಂಗಿ, ರಾಕೆಟ್ ಲಾಂಚರ್‌ಗಳು ಮತ್ತು ಟ್ಯಾಂಕ್‌ಗಳನ್ನು ಸಾಗಿಸುವ ಟ್ರಕ್‌ಗಳು ಈ ರಸ್ತೆಗಳ ಮೂಲಕ ಹಾದುಹೋಗಬೇಕಾಗಬಹುದು ಎಂದು ಕೇಂದ್ರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ಈ ವರ್ಷ ಭಾರೀ ಭೂಕುಸಿತಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. "ಇದು ಪರ್ವತಗಳ ಮೇಲಿನ ಹಾನಿಯನ್ನು ಉಲ್ಬಣಗೊಳಿಸಿದೆ" ಎಂದು ಅವರು ಹೇಳಿದರು. "ಪರಿಸರ ಅಗತ್ಯಗಳು ರಾಷ್ಟ್ರದ ರಕ್ಷಣೆಗೆ ತುತ್ತಾಗಿದೆ ಎಂದು ನಾನು ಹೇಳಲು ಹೋಗುವುದಿಲ್ಲ. ಆದರೆ ನಮಗೆ ಈ ವಿಶಾಲವಾದ ರಸ್ತೆಗಳು ಬೇಕು ಎಂದು ಸೇನೆಯು ಎಂದಿಗೂ ಹೇಳಿಲ್ಲ. ರಾಜಕೀಯ ಅಧಿಕಾರದಲ್ಲಿರುವ ಯಾರೋ ಒಬ್ಬರು ಚಾರ್ ಧಾಮ್ ಯಾತ್ರೆಯಲ್ಲಿ ನಮಗೆ ಹೆದ್ದಾರಿಗಳು ಬೇಕು ಎಂದು ಹೇಳಿದರು. ಸೇನೆಯು ಬೇಡ ಎನ್ನದೆ ಸುಮ್ಮನಿದೆ" ಎಂದು ಗೊನ್ಸಾಲ್ವಿಸ್ ಹೇಳಿದರು.
2013 ರಲ್ಲಿ ಮೇಘಸ್ಫೋಟದ ನಂತರ ಈ ಸಮಸ್ಯೆಯನ್ನು ಅರಿತುಕೊಂಡು ಉನ್ನತ ನ್ಯಾಯಾಲಯವು 24 ಯೋಜನೆಗಳಿಗೆ ಸ್ಥಗಿತಗೊಳಿಸಿದ ಹಿಂದಿನ ನಿದರ್ಶನವನ್ನು ಅವರು ಸೂಚಿಸಿದರು. ಹಿಮಾಲಯದಲ್ಲಿ ಸುಮಾರು 17 ಜಲವಿದ್ಯುತ್ ಯೋಜನೆಗಳಿಂದಾಗಿ ಕ್ಲೌಡ್‌ಬರ್ಸ್ಟ್ ಹಾನಿ ಉಂಟಾಗಿದೆ ಎಂದು ಗೊನ್ಸಾಲ್ವಿಸ್ ಹೇಳಿದರು. ರಾಷ್ಟ್ರದ ರಕ್ಷಣೆಯು ಆದ್ಯತೆಯಾಗಿದೆ ಮತ್ತು ಉನ್ನತೀಕರಣದ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ. "ಇತ್ತೀಚೆಗಿನ ಗಡಿ ಘಟನೆಗಳ ಬೆಳಕಿನಲ್ಲಿ ರಕ್ಷಣಾ ಕಾಳಜಿಯನ್ನು ಅತಿಯಾಗಿ ಮಾಡಲಾಗುವುದಿಲ್ಲ. 1962 ರ ಪರಿಸ್ಥಿತಿಯಲ್ಲಿ ಪಡೆಗಳು ಸಿಕ್ಕಿಬೀಳುವುದನ್ನು ನಾವು ಬಯಸುವುದಿಲ್ಲ" ಎಂದು ತ್ರಿಸದಸ್ಯ ಪೀಠ ಹೇಳಿದೆ. ಆದರೆ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ರಕ್ಷಣೆ ಮತ್ತು ಪರಿಸರ ಎರಡೂ ಅಗತ್ಯಗಳನ್ನು "ಸಮತೋಲಿತವಾಗಿರಬೇಕು" ಎಂದು ಹೇಳಿದರು.
ಇದರಲ್ಲಿ ನಮ್ಮ ಸಂಕಟವನ್ನು ಹೇಳಲೇಬೇಕು ಎಂದರು. "ಕೇಂದ್ರವು ರಸ್ತೆ ಅಗಲೀಕರ ಪ್ರವಾಸೋದ್ಯಮಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದರೆ, ನಾವು ಅದಕ್ಕೆ ಹೆಚ್ಚು ಕಠಿಣವಾದ ಷರತ್ತುಗಳನ್ನು ವಿಧಿಸಬಹುದು. ಆದರೆ ಗಡಿಗಳನ್ನು ರಕ್ಷಿಸಲು ಅದು ಅಗತ್ಯವಾದಾಗ ಅದು ಗಂಭೀರ ಸಂಕಟವಾಗಿದೆ ಮತ್ತು ನ್ಯಾಯಾಲಯವು ಹೆಚ್ಚು ಸೂಕ್ಷ್ಮವಾಗಿರಬೇಕು" ಎಂದರು. ಇಷ್ಟು ಎತ್ತರದಲ್ಲಿ ರಾಷ್ಟ್ರದ ಭದ್ರತೆ ಅಪಾಯದಲ್ಲಿದೆ ಎಂಬ ಅಂಶವನ್ನು ನ್ಯಾಯಾಲಯ ಅಲ್ಲಗಳೆಯುವಂತಿಲ್ಲ ಎಂದು ಅವರು ಹೇಳಿದರು. ಹಿಮನದಿಗಳು ವೇಗವಾಗಿ ಕರಗುತ್ತಿರುವುದನ್ನು ಸೂಚಿಸಿದ ಅವರು, ಅತಿರೇಕದ ಅಭಿವೃದ್ಧಿ ಯೋಜನೆಗಳಿಂದಲೂ ಇದು ನಡೆಯುತ್ತಿದೆ ಎಂದು ಹೇಳಿದರು. ಹೀಗಾಗಿ "ಪರಿಸರದ ಅವನತಿ ಸಂಭವಿಸದಂತೆ ರಕ್ಷಣಾ ಕಾಳಜಿ ವಹಿಸಬೇಕೆಂದು ನಾವು ಹೇಳುತ್ತೇವೆ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಚೀನೀಯರು ಕಟ್ಟಡಗಳು ಮತ್ತು ಸಂಸ್ಥೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಲಾದ ಗಡಿಯ ಇನ್ನೊಂದು ಬದಿಯಲ್ಲಿರುವ ಹಿಮಾಲಯದ ಸ್ಥಿತಿಯ ಬಗ್ಗೆ ನಿಮ್ಮ ಬಳಿ ಯಾವುದೇ ವರದಿಗಳಿವೆಯೇ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಗೊನ್ಸಾಲ್ವಿಸ್ ಅವರನ್ನು ಕೇಳಿದರು. "ಚೀನಾ ಸರ್ಕಾರವು ಪರಿಸರವನ್ನು ರಕ್ಷಿಸಲು ಹೆಸರುವಾಸಿಯಾಗಿಲ್ಲ. ನಾವು ಪ್ರಯತ್ನಿಸುತ್ತೇವೆ ಮತ್ತು ಅಲ್ಲಿನ ಪರಿಸ್ಥಿತಿ ಏನೆಂಬುದರ ಬಗ್ಗೆ ವರದಿಗಳನ್ನು ಪಡೆಯಬಹುದೇ ಎಂದು ನೋಡುತ್ತೇವೆ" ಎಂದು ಗೊನ್ಸಾಲ್ವಿಸ್ ಹೇಳಿದರು. ಈ ವಿಚಾರಣೆ ಇಂದು ಮುಂದುವರಿಯಲಿದೆ.