ಕುಂಬಳೆ: ಲಿಂಗ ಸಮಾನತೆಯನ್ನು ಉತ್ತೇಜಿಸಲು ಸಂಸ್ಕøತಿ ಇಲಾಖೆ ಆರಂಭಿಸಿರುವ 'ಸಮಾನತೆ-ಮಹಿಳಾ ಸಮಾನತೆಗಾಗಿ ಸಾಂಸ್ಕೃತಿಕ ಪ್ರಗತಿ' ಉಪಕ್ರಮದ ಭಾಗವಾಗಿ, ಜಿಲ್ಲೆಯಲ್ಲಿ ವರ್ಷವಿಡೀ ವ್ಯಾಪಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ಥಳೀಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷರಾಗಿ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಂಚಾಲಕರಾಗಿ ಜಿಲ್ಲಾ ಸಮಿತಿ ರಚಿಸಲಾಗಿದೆ. ಬಳಿಕ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗುವುದು.
ವಿಚಾರ ಸಂಕಿರಣ, ದಾಖಲೀಕರಣ, ನಾಟಕ, ಮಹಿಳಾ ಕವಿಗೋಷ್ಠಿ, ಮಹಿಳಾ ಕಾನೂನು ಅರಿವು, ಮಹಿಳಾ ಚಿತ್ರಕಲಾ ಶಿಬಿರ, ಕಲಾ ಗ್ಯಾಲರಿ, ಪುಸ್ತಕ ಚರ್ಚೆ, ಪ್ರದರ್ಶನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ವಜ್ರಮಹೋತ್ಸವ ಕಲಾ ಕಾರ್ಯಕ್ರಮ ಕುಟುಂಬಶ್ರೀ, ಯುವ ಕಲ್ಯಾಣ ಮಂಡಳಿ, ಯುವ ಆಯೋಗ, ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ನೇತೃತ್ವದಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವೀ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಟಿ.ಪಿ.ನಂದಕುಮಾರ್ ವಹಿಸಿದ್ದರು. ಮಲಯಾಳಂ ಮಿಷನ್ ನಿರ್ದೇಶಕಿ ಸುಜಾ ಸೂಸನ್ ಜಾರ್ಜ್ ಆನ್‍ಲೈನ್‍ನಲ್ಲಿ ಯೋಜನೆಯನ್ನು ವಿವರಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಆನ್ ಲೈನ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಕೆ.ಮಣಿಕಂಠನ್, ಯುವ ಕಾರ್ಯಕ್ರಮ ಅಧಿಕಾರಿ ಶಿಲಾಸ್ ಸುರೇಶ್, ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್, ವಜ್ರ ಮಹೋತ್ಸವ ಜಿಲ್ಲಾ ಸಂಯೋಜಕ ಮಣಿಪ್ರಸಾದ್ ಐ.ಭಾನುಮತಿ ಮಾತನಾಡಿದರು. ಮಾಜಿ ಯುವ ಕಾರ್ಯಕ್ರಮ ಅಧಿಕಾರಿ ಪ್ರಸೀತಾ ಸ್ವಾಗತಿಸಿ, ಯುವ ಕಲ್ಯಾಣ ಮಂಡಳಿ ಸದಸ್ಯ ಎ.ವಿ. ಶಿವಪ್ರಸಾದ್ ವಂದಿಸಿದರು. ಸಂಸ್ಕೃತಿ ನಿರ್ದೇಶನಾಲಯ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಲಿದೆ.