HEALTH TIPS

ಸಣ್ಣ ರೈತರನ್ನು ಬಲಪಡಿಸುವುದು ಕೃಷಿ ಕಾನೂನುಗಳ ಉದ್ದೇಶವಾಗಿತ್ತು; ಮೋದಿ

             ನವದೆಹಲಿ; "ದೇಶದ ರೈತರು ವಿಶೇಷವಾಗಿ ಸಣ್ಣ ರೈತರನ್ನು ಬಲಪಡಿಸಬೇಕು, ಅವರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಗರಿಷ್ಠ ಆಯ್ಕೆಗಳನ್ನು ಪಡೆಯಬೇಕು ಎಂಬುದು ಮೂರು ಕೃಷಿ ಕಾನೂನುಗಳ ಉದ್ದೇಶವಾಗಿತ್ತು" ಎಂದು ಭಾರತದ ಪ್ರಧಾನಿ  ಹೇಳಿದರು.

           ಶುಕ್ರವಾರ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. "2014ರಲ್ಲಿ ನನಗೆ ಪ್ರಧಾನಿಯಾಗಿ ದೇಶ ಸೇವೆ ಮಾಡುವ ಅವಕಾಶ ನೀಡಿದಾಗ, ನಾವು ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆವು" ಎಂದರು.

          "ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ನಾವು ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ" ಎಂದು ಮೋದಿ ಘೋಷಣೆ ಮಾಡಿದರು.

          ತಮ್ಮ ಭಾಷಣದಲ್ಲಿ ಮೋದಿ, ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿದರು. ಒಂದೂವರೆ ವರ್ಷಗಳ ಅಂತರದ ನಂತರ ಕರ್ತಾರ್‌ಪುರ್ ಸಬಿಹ್ ಕಾರಿಡಾರ್ ಅನ್ನು ಯಾತ್ರಿಗಳಿಗೆ ಮತ್ತೆ ಪ್ರವೇಶಮುಕ್ತ ಗೊಳಿಸಿರುವ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು.

           ರೈತರ ಸವಾಲುಗಳನ್ನು ನೋಡಿದ್ದೇನೆ :
           "ನನ್ನ ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ರೈತರ ಸವಾಲುಗಳನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ, ಅದಕ್ಕಾಗಿಯೇ 2014ರಲ್ಲಿ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದಾಗ, ನಾವು ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆವು. ರೈತರ ಪರಿಸ್ಥಿತಿಗಳನ್ನು ಸುಧಾರಿಸಲು ಬೀಜಗಳು, ವಿಮೆ, ಮಾರುಕಟ್ಟೆ ಮತ್ತು ಉಳಿತಾಯದ ನಾಲ್ಕು ಹಂತದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತಮ ಗುಣಮಟ್ಟದ ಬೀಜಗಳೊಂದಿಗೆ, ಸರಕಾರವು ರೈತರಿಗೆ ಬೇವು ಲೇಪಿತ ಯೂರಿಯಾ, ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಸೂಕ್ಷ್ಮ ನೀರಾವರಿಯಂತಹ ಸೌಲಭ್ಯಗಳನ್ನು ನೀಡುತ್ತಿದೆ" ಎಂದು ಮೋದಿ ಹೇಳಿದರು.
            ಉತ್ಪನ್ನಗಳ ಖರೀದಿಯಲ್ಲಿ ದಾಖಲೆ
           "ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಯಾಗಿ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಪಡೆಯುವಂತಾಗಲು ಅನೇಕ ಉಪಕ್ರಮಗಳನ್ನು ಸರಕಾರ ಕೈಗೊಂಡಿದೆ. ದೇಶದಲ್ಲಿ ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. ನಾವು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿರುವುದು ಮಾತ್ರವಲ್ಲದೆ, ದಾಖಲೆ ಸಂಖ್ಯೆಯಲ್ಲಿ ಸರಕಾರಿ ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ. ನಮ್ಮ ಸರಕಾರವು ರೈತರು ಬೆಳೆದ ಉತ್ಪನ್ನಗಳ ಖರೀದಿಯಲ್ಲಿ ಕಳೆದ ಹಲವಾರು ದಶಕಗಳ ದಾಖಲೆಗಳನ್ನು ಮುರಿದಿದೆ" ಎಂದು ಮೋದಿ ತಿಳಿಸಿದರು.
           ಮೂರು ಕಾನೂನು ರೂಪಿಸಲಾಯಿತು
          "ರೈತರ ಸ್ಥಿತಿಯನ್ನು ಸುಧಾರಿಸುವ ಈ ಮಹಾನ್ ಅಭಿಯಾನದ ಭಾಗವಾಗಿ ದೇಶದಲ್ಲಿ ಮೂರು ಕೃಷಿ ಕಾನೂನುಗಳನ್ನು ರೂಪಿಸಲಾಯಿತು. ದೇಶದ ರೈತರು ವಿಶೇಷವಾಗಿ ಸಣ್ಣ ರೈತರನ್ನು ಬಲಪಡಿಸಬೇಕು, ಅವರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಗರಿಷ್ಠ ಆಯ್ಕೆಗಳನ್ನು ಪಡೆಯಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಹಲವಾರು ವರ್ಷಗಳಿಂದ ದೇಶದ ರೈತರು, ದೇಶದ ಕೃಷಿ ತಜ್ಞರು ಮತ್ತು ದೇಶದ ರೈತ ಸಂಘಟನೆಗಳು ನಿರಂತರವಾಗಿ ಈ ಬೇಡಿಕೆಯನ್ನು ಇಡುತ್ತಾ ಬಂದಿದ್ದವು" ಎಂದು ಪ್ರಧಾನಿ ಮೋದಿ ಹೇಳಿದರು. "ಈ ಹಿಂದೆಯೂ ಅನೇಕ ಸರಕಾರಗಳು ಈ ಬಗ್ಗೆ ಚಿಂತನ-ಮಂಥನ ಮಾಡಿದ್ದವು. ಈ ಬಾರಿಯೂ ಸಂಸತ್ತಿನಲ್ಲಿ ಚರ್ಚೆ ನಡೆಯಿತು, ಚಿಂತನ-ಮಂಥನ ನಡೆಯಿತು ಮತ್ತು ಆ ಬಳಿಕವಷ್ಟೇ ಈ ಕಾನೂನುಗಳನ್ನು ತರಲಾಯಿತು. ದೇಶದ ಮೂಲೆ ಮೂಲೆಗಳಲ್ಲಿ ಅನೇಕ ರೈತ ಸಂಘಟನೆಗಳು ಅದನ್ನು ಸ್ವಾಗತಿಸಿ ಬೆಂಬಲಿಸಿದವು" ಎಂದ ಮೋದಿ ಈ ಕ್ರಮವನ್ನು ಬೆಂಬಲಿಸಿದ ಸಂಘಟನೆಗಳು, ರೈತರು ಮತ್ತು ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿದರು. 
          ರೈತರಿಗೆ ಅರ್ಥಮಾಡಿಸಲು ಸಾಧ್ಯವಾಗಲಿಲ್ಲ 
           "ಕೃಷಿ ವಲಯದ ಹಿತದೃಷ್ಟಿಯಿಂದ ರೈತರ ಕಲ್ಯಾಣಕ್ಕಾಗಿ, ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ಗ್ರಾಮೀಣ-ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆ, ಸ್ಪಷ್ಟ ಆತ್ಮಸಾಕ್ಷಿ ಮತ್ತು ರೈತರ ಬಗ್ಗೆ ಸಮರ್ಪಣೆ ಭಾವದೊಂದಿಗೆ ಸರಕಾರ ಈ ಕಾನೂನುಗಳನ್ನು ತಂದಿದೆ. ಆದರೆ, ಇಂತಹ ಪವಿತ್ರವಾದ, ಸಂಪೂರ್ಣ ನಿಷ್ಕಲ್ಮಶವಾದ, ರೈತರ ಆಸಕ್ತಿಯ ವಿಷಯವನ್ನು ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ನಾವು ಕೆಲವು ರೈತರಿಗೆ ಅರ್ಥಮಾಡಿಸಲು ಸಾಧ್ಯವಾಗಲಿಲ್ಲ. ಕೃಷಿ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಪ್ರಗತಿಪರ ರೈತರು ಕೂಡ ಕೃಷಿ ಕಾನೂನುಗಳ ಮಹತ್ವವನ್ನು ಅವರಿಗೆ ಅರ್ಥಮಾಡಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡಿದರು. ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಇಡೀ ದೇಶದ ಜನತೆಗೆ ಹೇಳಲು ನಾನು ಬಂದಿದ್ದೇನೆ" ಎಂದರು. 
             ಸಮಿತಿ ರಚಿಸಲಾಗುತ್ತದೆ 
            ಪ್ರಧಾನಿ ಮೋದಿ, "ಶೂನ್ಯ ಬಜೆಟ್ ಆಧಾರಿತ ಕೃಷಿಯನ್ನು ಉತ್ತೇಜಿಸಲು, ದೇಶದಲ್ಲಿ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಬೆಳೆ ಮಾದರಿಯನ್ನು ಬದಲಾಯಿಸಲು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕಗೊಳಿಸಲು ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರಗಳು, ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರ ಪ್ರತಿನಿಧಿಗಳು ಇರಲಿದ್ದಾರೆ" ಎಂದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries