ತಿರುವನಂತಪುರ; ಕಾಡು ಹಂದಿಯನ್ನು ಕ್ಷುದ್ರಜೀವಿ ಎಂದು ಘೋಷಿಸಲು ಕೇಂದ್ರಕ್ಕೆ ನೀಡಬೇಕಾದ ಮಾಹಿತಿಯನ್ನು ಕೇರಳ ನೀಡಿಲ್ಲ ಎಂದು ತಿಳಿದುಬಂದಿದೆ. ಕೃಷಿ ಹಾಗೂ ಮನುಷ್ಯರಿಗೆ ಅಪಾಯ ತಂದೊಡ್ಡುತ್ತಿರುವ ಕಾಡುಹಂದಿ ಪ್ರಕರಣದಲ್ಲಿ ಕೇರಳ ಕೈಗೊಂಡಿರುವ ಕ್ರಮಗಳ ಕುರಿತು ಸ್ಪಷ್ಟನೆ ನೀಡುವಂತೆ ಆರ್ ಟಿಐ ಕಾರ್ಯಕರ್ತ ಕೆ. ಗೋವಿಂದನ್ ನಂಬೂದಿರಿ ಎಂಬವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪತ್ರ ಸಲ್ಲಿಸಿದ್ದರು. ಇದಕ್ಕೆ ಕಳೆದ ತಿಂಗಳು 22ರಂದು ನೀಡಿದ ಉತ್ತರದಲ್ಲಿ ಕೇರಳದ ಅಸಡ್ಡೆ ಸ್ಪಷ್ಟವಾಗಿದೆ.
ಜುಲೈ 8ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ರಾಜ್ಯ ಅರಣ್ಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು 2011ರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಪ್ರಕರಣದ ವಿವರಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿತ್ತು. ಆದರೆ, ಅರಣ್ಯ ಇಲಾಖೆ ಇನ್ನೂ ಮಾಹಿತಿ ನೀಡಿಲ್ಲ ಎಂದು ಆರ್‍ಟಿಐ ಹೇಳಿದೆ. ಮೂರು ತಿಂಗಳು ಕಳೆದರೂ ಕೇರಳ ಮಾಹಿತಿ ನೀಡಲು ಸಿದ್ಧವಾಗಿಲ್ಲ. ಆದರೆ, ಈ ವರ್ಷ ಜೂನ್ 17ರಂದು ಕಾಡುಹಂದಿ ಸಮಸ್ಯೆ ಕುರಿತು ರಾಜ್ಯ ಸರ್ಕಾರ ಕಳುಹಿಸಿದ್ದ ಪತ್ರಕ್ಕೆ ಕೇಂದ್ರವೂ ಉತ್ತರ ನೀಡಿಲ್ಲ ಎಂದು ಸಚಿವ ಶಶೀಂದ್ರನ್ ಆಗಸ್ಟ್ 6ರಂದು ವಿಧಾನಸಭೆಗೆ ತಿಳಿಸಿದ್ದರು.
ಆದರೆ, 2011ರಿಂದ ರಾಜ್ಯ ಸರ್ಕಾರವು ಕಾಡುಹಂದಿ ನಿರ್ಮೂಲನೆಗೆ ಪಂಚಾಯ್ತಿಗಳ ಮೂಲಕ ಕೈಗೊಂಡಿರುವ ಕ್ರಮಗಳ ಕುರಿತು ವಿಸ್ತೃತ ವರದಿ ನೀಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪತ್ರ ಬಿಡುಗಡೆ ಮಾಡಿದ್ದು, ಸಚಿವರು ಹೇಳುತ್ತಿರುವುದು ಸುಳ್ಳು ಎಂಬುದು ಸ್ಪಷ್ಟವಾಗಿದೆ.
ಕೇಂದ್ರ ಸರಕಾರ ಕೋರಿರುವ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರಲು ವಿಫಲವಾಗಿರುವ ಅರಣ್ಯ ಇಲಾಖೆ ಕೇಂದ್ರ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಐವರ ವಿರುದ್ಧ ಕ್ರಮಕ್ಕೆ ಸಚಿವ ಶಶೀಂದ್ರನ್ ಆದೇಶ ನೀಡಿದ್ದಾರೆ.