ನವದೆಹಲಿ: ದೆಹಲಿಯಲ್ಲಿನ ಡೆಂಗ್ಯೂ ಪರಿಸ್ಥಿತಿಯನ್ನು ಅವಲೋಕಿಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ರಾಷ್ಟ್ರ ರಾಜಧಾನಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಡೆಂಗ್ಯೂ ಸಕ್ರಿಯ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಗೆ ತಜ್ಞರ ತಂಡವನ್ನು ಗುರುತಿಸಿ ರಾಜ್ಯಗಳಿಗೆ ಕಳುಹಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೋಮವಾರ ಸೂಚಿಸಿದ್ದಾರೆ.
ಮಾಂಡವಿಯಾ ಅವರು ಡೆಂಗ್ಯೂ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಪರಿಶೀಲಿಸಲು ದೆಹಲಿ ಸರ್ಕಾರದೊಂದಿಗೆ ಇಂದು ಉನ್ನತ ಮಟ್ಟದ ಸಭೆ ನಡೆಸಿದರು.
"ದೆಹಲಿಯಲ್ಲಿ ಡೆಂಗ್ಯೂ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
"ರೋಗವನ್ನು ನಿಗ್ರಹಿಸಲು ಹಾಟ್‌ಸ್ಪಾಟ್ ಗುರುತಿಸುವಿಕೆ, ಫಾಗಿಂಗ್ ಮತ್ತು ಸಕಾಲಿಕ ಚಿಕಿತ್ಸೆಯಂತಹ ಆನ್-ಗ್ರೌಂಡ್ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಕೇಂದ್ರವು ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳಿಗೆ ತಜ್ಞರ ತಂಡವನ್ನು ಕಳುಹಿಸುತ್ತಿದೆ" ಎಂದು ಅವರು ಹೇಳಿದ್ದಾರೆ.