ಕಾಸರಗೋಡು: ಕೋವಿಡ್ ಪ್ರತಿರೋಧ ಅಂಗವಾಗಿ ನೀಡಲಾಗುವ ವಾಕ್ಸಿನೇಷನ್ ನ ದ್ವಿತೀಯ ಡೋಸ್ ಬಗ್ಗೆ ಕೆಲವು ಅಸಡ್ಡೆ ತೋರುತ್ತಿರುವುದು ಕಾಸರಗೋಡು ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಕೋವಿಡ್ ಹರಡುವಿಕೆ ನಿಯಂತ್ರಣದ ಸಾಧನೆಗೆ ಧಕ್ಕೆಯಾಗುವ ಭೀತಿಯಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ತಿಳಿಸಿದರು.
ಜಿಲ್ಲೆಯಲ್ಲಿ ವಾಕ್ಸಿನೇಷನ್ ಗೆ ಅರ್ಹರಾಗಿರುವ ಮಂದಿಯಲ್ಲಿ ಶೇ 98.07 ಮಂದಿಗೆ ಮೊದಲ ಹಂತದ ಡೋಸ್ ನೀಡಲಾಗಿದೆ. ಆದರೆ ದ್ವಿತೀಯ ಹಂತದ ಡೋಸ್ ಸ್ವೀಕರಿಸಿದವರು ಕೇವಲ ಶೇ 59.56 ಆಗಿರುವುದು ಆತಂಕಕ್ಕೆ ಕಾರಣವಾಗಿದೆ.
ಎರಡನೇ ಡೋಸ್ ಲಸಿಕೆ ಸ್ವೀಕರಿಸುವ ಕಾಲಾವಧಿ ತಲಪಿದ್ದರೂ, ಕಾಸರಗೋಡು ಜಿಲ್ಲೆಯಲ್ಲಿ 55500 ಮಂದಿ ಲಸಿಕೆ ಪಡೆಯದೇ ಉಳಿದಿದ್ದಾರೆ.
ಕೊರೋನಾ ಸೋಕಿನ ವಿರುದ್ಧ ದೇಹದಲ್ಲಿ ಆಂಟಿಬಾಡಿ ಸೃಷ್ಟಿಸಿ ಪ್ರತಿರೋಧ ಖಚಿತ ಪಡಿಸುವುದು ವಾಕ್ಸಿನೇಷನ್ ನ ಸ್ವಭಾವವಾಗಿದೆ. ಮೊದಲ ಡೋಸ್ ವಾಕ್ಸೀನ್ ಸ್ವೀಕರಿಸಿದವರಲ್ಲಿ ಶರೀರದಲ್ಲಿ ಆಂಟಿಬಾಡಿ ಉತ್ಪಾದನೆ ನಿಧಾನವಾಗಿ ಆರಂಭಗೊಳ್ಳುವುದು ಮತ್ತು ಉನ್ನತ ಪ್ರತಿರೋಧ ಸಾಮಥ್ರ್ಯ ದತ್ತ ದೇಹವನ್ನು ತಲಪಿಸುವುದು ನಡೆಯುತ್ತದೆ. ನಂತರ ಶರೀರದಲ್ಲಿ ಆಂಟಿಬಾಡಿಯ ಮಟ್ಟ ಕಡಿಮೆಯಾಗುತ್ತಾ ಬರುತ್ತದೆ. ಹೀಗೆ ಮಟ್ಟ ಕೆಳಸ್ತರವಾಗುವ ಸಮಯದಲ್ಲಿ ದ್ವಿತೀಯ ಹಂತದ ಡೋಸ್ ಸ್ವೀಕರಿಸಿ ಆಂಟಿಬಾಡಿ ಸುಸ್ಥಿರಗೊಳ್ಳುವಂತೆ ಮತ್ತದು ದೀರ್ಘ ಅವಧಿ ವರೆಗೆ ನೆಲೆಗೊಳ್ಳುವಂತೆ ಮಾಡುತ್ತದೆ. ಎರಡನೇ ಡೋಸ್ ಸ್ವೀಕರಿಸಿದೇ ಇರುವ ಮಂದಿಯಲ್ಲಿ ಪ್ರತಿರೋಧ ಸಾಮಥ್ರ್ಯ ಕೆಳಮುಖಗೊಳ್ಳುವುದು ಎಂದು ಅಧ್ಯಯನಗಳು ಖಚಿತಪಡಿಸಿವೆ ಎಂದವರು ನುಡಿದರು.
ರೋಗ ನಿಯಂತ್ರಣ ಚಟುವಟಿಕೆಗಳಲ್ಲಿ ಅತಿ ಮಹತ್ವ ಪಡೆದಿರುವ ವಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಎಲ್ಲ ಜನತೆ ಪೂರ್ಣರೂಪದಲ್ಲಿ ಸಹಕಾರ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿ ವಿನಂತಿಸಿದರು.