ರುದ್ರಪ್ರಯಾಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶಿವನಿಗೆ ನಡೆದ ಮಹಾ ರುದ್ರಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡ ಅವರು ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಾಲಯದ ಹಿಂದೆ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಆದಿ ಶಂಕರಾಚಾರ್ಯ ಅವರ ಪುತ್ಥಳಿ ಅನಾವರಣಗೊಳಿಸಿದರು.
2013ರ ಜಲಪ್ರಳಯದಲ್ಲಿ ಹಾನಿಗೀಡಾದ ಶಂಕರಾಚಾರ್ಯ ಸಮಾಧಿಯನ್ನು ಇದೀಗ ಪುನರ್ ನಿರ್ಮಾಣ ಮಾಡಲಾಗಿದ್ದು, ಅದನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಉದ್ಘಾಟಿಸಿರುವ ಈ ಸುಂದರ ಪುತ್ಥಳಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ್ದಾರೆ.
ಸ್ವತಃ ಪ್ರಧಾನಮಂತ್ರಿಗಳ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ ಕಲಾವಿನದಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ.
2013ರಲ್ಲಿ ಭಾರೀ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿ ಹೋಗಿತ್ತು. ಅದರ ಮರು ನಿರ್ಮಾಣ ಭಾಗವಾಗಿ ಕೇದಾರೇಶ್ವರ ದೇಗುಲದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಲಾಗಿದೆ.
ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 35 ಟನ್ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್ ನ ಕೃಷ್ಣ ಶಿಲೆ ಬಳಸಲಾಗಿದೆ. ಇದು ಗಾಳಿ-ಮಳೆ, ಬಿಸಿಲು ಮತ್ತು ಕಠಿಣ ಹವಾಮಾನ ತಾಳಿಕೊಳ್ಳುವ ಸಾಮರ್ಥ್ಯನ್ನು ಹೊಂದಿದೆ. ಪುತ್ಥಳಿ ಹೊಳಪಿಗಾಗಿ ತೆಂಗಿನಕಾಯಿ ನೀರಿನಿಂದ ಪಾಲಿಶ್ ಮಾಡಲಾಗಿದೆ.
ಮೈಸೂರಿನ ಯೋಗಿರಾಜ್ ಶಿಲ್ಪಿ ಕುಟುಂಬ 5 ತಲೆಮಾರಿನಿಂದ ಕಲ್ಲಿನ ಕೆತ್ತನೆಯಲ್ಲಿ ನೈಪುಣ್ಯ ಪಡೆದಿದೆ. ಯೋಗಿರಾಜ್ ತಮ್ಮ ಪುತ್ರ ಅರುಣ್ ಜೊತೆ ಸೇರಿ ಶಂಕರರ ಪುತ್ಥಳಿ ಕೆತ್ತಿದ್ದಾರೆ. 2020ರ ಸೆಪ್ಟೆಂಬರ್ ನಲ್ಲಿ ಕೆತ್ತನೆ ಆರಂಭಿಸಿ ಇತ್ತೀಚೆಗೆ ಅದನ್ನು ಪೂರ್ಣಗೊಳಿಸಲಾಗಿತ್ತು.
ಮೈಸೂರಿನಲ್ಲಿ ಪುತ್ಥಳಿ ಬಳಿಕ ಅದನ್ನು ಉತ್ತರಾಖಂಡದ ಚಮೋಲಿ ಏರ್'ಬೇಸ್ ವರೆಗೆ ರಸ್ತೆ ಮೂಲಕ ಸಾಗಿಸಲಾಗಿತ್ತು. ಅಲ್ಲಿಂದ ಕೇದಾರನಾಥಕ್ಕೆ ವಾಯುಪಡೆ ಚಿನೂಕ್ ಹೆಲಿಕಾಪ್ಟರ್ ಮೂಲಕ ಸಾಗಿಸಿತ್ತು.