ಪತ್ತನಂತಿಟ್ಟ: ಪಂಪಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದ ಕಾರಣ ಕಾಕಿ ಅಣೆಕಟ್ಟು ತೆರೆದಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ಜಿಲ್ಲಾಧಿಕಾರಿಗಳು ಇಂದು (ಶನಿವಾರ) ನಿಷೇಧ ಹೇರಿದ್ದಾರೆ. ಪಂಪಾ ಮತ್ತು ಶಬರಿಮಲೆಗೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಜಿಲ್ಲಾಧಿಕಾರಿ ಡಾ.ದಿವ್ಯಾ ಎಸ್ ಅಯ್ಯರ್ ನಿರ್ಬಂಧ ವಿಧಿಸಿದ್ದಾರೆ.
ಪಂಪಾ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ನೀರಿನ ಮಟ್ಟ ಕಡಿಮೆಯಾದ ತಕ್ಷಣ ವರ್ಚುವಲ್ ಸರತಿ ಸಾಲಿನಲ್ಲಿ ಬುಕ್ ಮಾಡಿದ ಎಲ್ಲ ಭಕ್ತರು ಮಲೆಗೆ ತೆರಳಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ 9 ಗಂಟೆಯಿಂದ ಪಂಪಾ ಡ್ಯಾಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಪಾ ನದಿಯ ಎರಡೂ ಬದಿಯಲ್ಲಿ ವಾಸಿಸುವ ಜನರು, ಶಬರಿಮಲೆ ಯಾತ್ರಿಕರು ಮತ್ತು ಸಾರ್ವಜನಿಕರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ. ಯಾತ್ರಾರ್ಥಿಗಳು ಮತ್ತು ಇತರರು ನದಿಗೆ ಇಳಿಯುವುದನ್ನು ತಡೆಯಲು ಸೂಚಿಸಲಾಗಿದೆ.