ಛತ್ತೀಸ್ ಗಢ: ಹಿಂದೂ ಧರ್ಮಕ್ಕೆ ಯಾರನ್ನೂ ಧರ್ಮ ಅಥವಾ ಮತ ಪರಿವರ್ತನೆ ಮಾಡುವ ಅವಶ್ಯಕತೆಯಿಲ್ಲ, ಎಲ್ಲರನ್ನೂ ಒಗ್ಗೂಡಿಸಿ ಒಟ್ಟಿಗೆ ಕರೆದುಕೊಂಡು ಹೋಗುವ ಕ್ರಮ ಹಿಂದೂ ಧರ್ಮದಲ್ಲಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಲವಂತವಾಗಿ ಧರ್ಮ ಅಥವಾ ಮತ ಪರಿವರ್ತನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಛತ್ತೀಸ್ ಗಢದಲ್ಲಿ ಇಂದು ಅವರು ಘೋಷ್ ಶಿವಿರ್ ಕಾರ್ಯಕ್ರಮದಲ್ಲಿ ಮಾತನಾಡಿ ವೈವಿಧ್ಯತೆ ಭಾರತ ದೇಶದ ಶಕ್ತಿ, ಇಲ್ಲಿನ ಜನರ ಜೀವನದ ಮೂಲಕ ವಿಶ್ವಗುರುವಾಗಲು ಜಗತ್ತಿಗೆ ಪ್ರೇರಣೆ ನೀಡುತ್ತೇವೆ. ಇಲ್ಲಿ ದುರ್ಬಲರನ್ನು ಶೋಷಿಸಲಾಗುತ್ತಿದೆ. ವಿವಿಧತೆಯಲ್ಲಿ ಏಕತೆಯೆಂಬ ರಾಗವನ್ನು ಕದಡಲು ಯಾರಾದರೂ ಪ್ರಯತ್ನಿಸಿದರೆ ಅವರನ್ನು ಲಯದಿಂದ ಸರಿದಾರಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ನಾವು ಯಾರನ್ನೂ ಮತಾಂತರ ಮಾಡುವ ಅಗತ್ಯವಿಲ್ಲ, ಆದರೆ ಉತ್ತಮ ಪ್ರಜೆಯಾಗಿ ಹೇಗೆ ಬಾಳ್ವೆ ನಡೆಸಬೇಕೆಂಬುದನ್ನು ಹೇಳಿಕೊಡಬೇಕು. ಭಾರತವೆಂಬ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ಜಗತ್ತಿಗೆ ಆ ಪಾಠವನ್ನು ಹೇಳಿಕೊಡಬೇಕು. ಇಲ್ಲಿ ಯಾವುದೇ ಮತ,ಧರ್ಮದ ಜನರ ಆರಾಧನೆ ಅಥವಾ ದೇವರನ್ನು ಪ್ರಾರ್ಥಿಸುವ, ಭಜಿಸುವ ವಿಧಾನವನ್ನು ತಿದ್ದದೆ ಉತ್ತಮ ಪ್ರಜೆಯಾಗಿ ರೂಪಿಸುವುದನ್ನು ಕಲಿಸುತ್ತದೆ ಎಂದರು.
ಭಾರತವು ಜಗತ್ತಿಗೆ ವಿಶ್ವಗುರುವಾಗಲೂ ನಾವು ಭಾರತೀಯರೆಲ್ಲರೂ ಸಮನ್ವಯದಿಂದ ಒಟ್ಟಾಗಿ ಮುಂದುವರಿಯುವ ಅಗತ್ಯವಿದೆ ಎಂದು ಸಹ ಮೋಹನ್ ಭಾಗವತ್ ಹೇಳಿದರು.