ನವದೆಹಲಿ: ಕೊರೊನಾ ನಂತರ ಲಾಕ್ ಡೌನ್ ಹಿಂಪಡೆಕೊಂಡಿರುವುದರಿಂದ ಹಾಗೂ ಸಾಲು ಸಾಲು ಹಬ್ಬಗಳಿಂದಾಗಿ ನಗರಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಉದ್ಯೋಗಾವಕಾಶಗಳು ಮತ್ತೆ ಏರುಗತಿಯಲ್ಲಿ ಸಾಗಿದೆ. ಅದರ ಪರಿಣಾಮವಾಗಿ ದೇಶಾದ್ಯಂತ ನೇಮಕಾತಿ ಪ್ರಮಾಣವೂ ಹೆಚ್ಚುತ್ತಿರುವ ಬೆಳವಣಿಗೆ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಇದೇ ವೇಳೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಹುಟ್ಟಿಸಿದೆ. ನಾಲ್ಕು ತಿಂಗಳ ಹಿಂದೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.75ರಷ್ಟಿತ್ತು. ಈಗ ಆ ಪ್ರಮಾಣ ಶೇ.7.38ಕ್ಕೆ ಕುಸಿದಿದೆ.
ನಾಲ್ಕು ತಿಂಗಳ ಕೆಳಗೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.6.86ರಷ್ಟಿತ್ತು. ಈಗ ಈ ಪ್ರಮಾಣ ಶೇ.7.91ಕ್ಕೆ ಏರಿಕೆಯಾಗಿದೆ. ನಗರಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಐಟಿ ಕ್ಷೇತ್ರದಲ್ಲಿನ ಪ್ರಗತಿ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.