ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ಭಾರತೀಯ ರೈಲ್ವೆಯು, ಹಂತ ಹಂತವಾಗಿ ರೈಲುಗಳಲ್ಲಿ ಕಾಯ್ದಿರಿಸದ ಕೋಚ್‌ಗಳನ್ನು ಮರು ಪರಿಚಯಿಸಲು ಆರಂಭಿಸಿದ್ದು, ಇದರಿಂದ ಕೌಂಟರ್‌ನಲ್ಲೇ ಟಿಕೆಟ್ ಖರೀದಿಸಿ ಪ್ರಯಾಣಿಸಲು ಅವಕಾಶ ದೊರಕಲಿದೆ.
ಕಾಯ್ದಿರಿಸದ ಕೋಚ್‌ಗಳನ್ನು ಮತ್ತೆ ಆರಂಭಿಸಬೇಕು ಎಂಬುದು ಹಲವು ರಾಜ್ಯಗಳ ರೈಲ್ವೆ ಪ್ರಯಾಣಿಕರ ಬೇಡಿಕೆಯಾಗಿತ್ತು. ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ಪ್ರಸರಣದ ವೇಗವನ್ನು ತಡೆಯುವ ಉದ್ದೇಶದಿಂದ ಭಾರತೀಯ ರೈಲ್ವೆಯು ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೀಟುಗಳನ್ನು ಕಾಯ್ದಿರಿಸುವುದನ್ನು ಕಳೆದ ವರ್ಷ ಕಡ್ಡಾಯಗೊಳಿಸಿತ್ತು.
ಇದೀಗ ಕೋವಿಡ್ ಪ್ರಕರಣಗಳು ಇಳಿಮುಖ ಆಗುತ್ತಿರುವುದರಿಂದ ಮತ್ತು ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ರೈಲ್ವೆಯು ಕೆಲ ಪ್ರಯಾಣಿಕ ರೈಲುಗಳಲ್ಲಿ ಕಾಯ್ದಿರಿಸದ ಕೋಚ್‌ಗಳನ್ನು ಪುನರಾರಂಭಿಸಲು ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.