ತಿರುಪತಿ: ಕಂಡು ಕೇಳರಿಯದ ಮಳೆ, ನೆರೆ ಪ್ರವಾಹದಿಂದ ತತ್ತರಿಸಿರುವ ಹೋಗಿರುವ ತಿರುಪತಿಯಲ್ಲಿ, ಮತ್ತೊಂದು ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈ ಬಗ್ಗೆ, ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ, ತಿರುಪತಿಯಿಂದ ತಿರುಮಲಗೆ ಹೋಗುವ ಶ್ರೀವಾರಿ ಮೆಟ್ಟಲುಗಳು ಬಹುತೇಕ ನಾಶವಾಗಿದ್ದು, ತಿರುಪತಿ ನಗರ ಕೆರೆಯಂತಾಗಿದೆ. ಟಿಟಿಡಿ ಭಕ್ತರಿಗೆ ಮನವಿಯನ್ನು ಮಾಡಿದ್ದು, ಸದ್ಯಕ್ಕೆ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.
ತಿರುಪತಿ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಭಾನುವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಇದುವರೆಗೆ ಮಹಾಮಳೆಗೆ ಮೃತ ಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ತಿರುಪತಿಯಲ್ಲಿ ಕಳೆದ ಮೂವತ್ತು ವರ್ಷದಲ್ಲಿ ಸುರಿದ ಭಾರೀ ಮಳೆ ಇದಾಗಿದೆ. ರಾಜ್ಯದ ಹಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ನೀರಿನಿಂದ ಜಲಾವೃತಗೊಂಡಿದ್ದು, ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ, ಸುರಿಯುತ್ತಿರುವ ಮಳೆಯಿಂದಾಗಿ, ಎಲ್ಲಾ ಕೆಲಸಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ನಡುವೆ, ತಿರುಪತಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ.
ರಾಮಚಂದ್ರಪುರಂನಲ್ಲಿರುವ ರಾಯಲಚಿರುವು ಅಣೆಕಟ್ಟು ಆಂಧ್ರ ಪ್ರದೇಶದ ಅತ್ಯಂತ ದೊಡ್ಡ ಅಣೆಕಟ್ಟಿನಲ್ಲಿ ಒಂದಾದ ರಾಮಚಂದ್ರಪುರಂನಲ್ಲಿರುವ ರಾಯಲಚಿರುವು ಅಣೆಕಟ್ಟು ಮಹಾಮಳೆಯಿಂದಾಗಿ ಬಿರುಕು ಬಿಟ್ಟಿದೆ. ಮಳೆಯ ನಡುವೆ ಇನ್ನೊಂದು ಅನಾಹುತದ ಆತಂಕ ಎದುರಾಗಿದ್ದು, ಅಣೆಕಟ್ಟು ಹಲವು ಜಾಗದಲ್ಲಿ ಬಿರುಕು ಬಿಟ್ಟಿರುವ ಸರಕಾರಕ್ಕೆ ದೊಡ್ದ ಚಿಂತೆಯ ವಿಷಯವಾಗಿದೆ. ಐನೂರು ವರ್ಷದ ಹಿಂದಿನ ಅಣೆಕಟ್ಟು ಇದಾಗಿದ್ದು, ಚಿತ್ತೂರು ಜಿಲ್ಲಾಡಳಿತ ಆ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣ್ ಈ ಅಣೆಕಟ್ಟಿನ ಕೆಳಗೆ ಹದಿನಾರು ಗ್ರಾಮಗಳಿದ್ದು, ಅಲ್ಲಿರುವ ಎಲ್ಲಾ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದೆ. ಈ ಅಣೆಕಟ್ಟು ತಿರುಪತಿ ಬಳಿಯಿದ್ದು, ತಕ್ಷಣಕ್ಕೆ ತೊಂದರೆಯಿಲ್ಲದಿದ್ದರೂ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಿದೆ. "ದಾಖಲೆ ಮತ್ತು ದಿನನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಸಾಕಷ್ಟು ಶೇಖರಣೆ ಮಾಡಿಟ್ಟುಕೊಂಡು, ಗ್ರಾಮ ತೊರೆಯುವಂತೆ ಮನವಿ ಮಾಡಲಾಗಿದೆ, ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ"ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣ್ ಹೇಳಿದ್ದಾರೆ.
ತಿರುಪತಿಯಿಂದ ತಿರುಮಲಕ್ಕೆ ಹೋಗುವ ಘಾಟ್ ಭಾರೀ ಮಳೆಗೆ ಜರ್ಝರಿತ ತಿರುಪತಿಯಿಂದ ತಿರುಮಲಕ್ಕೆ ಹೋಗುವ ಘಾಟ್ ಭಾರೀ ಮಳೆಗೆ ಜರ್ಝರಿತಗೊಂಡಿತ್ತು. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ರಾಯಲಚಿರುವು ಅಣೆಕ್ಕಟ್ಟಿಗೆ ನೀರಿನ ಒಳಹರಿವು ಒಂದೇ ಸಮನೆ ಏರುತ್ತಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ತಿರುಮಲಕ್ಕೆ ಹೋಗುವ ಹೆಚ್ಚಿನ ದಾರಿಗಳು ಬಂದ್ ಆಗಿರುವುದರಿಂದ, ಸದ್ಯಕ್ಕೆ ತಿಮ್ಮಪ್ಪನ ದರ್ಶನಕ್ಕೆ ಹೋಗದೇ ಇರುವುದು ಸೂಕ್ತ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.