ಹೈದರಾಬಾದ್: ಕೋವಿಡ್ -19 ಡೆಲ್ಟಾ ತಳಿಯ ಸೋಂಕಿನ ವಿರುದ್ಧ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಸಂಶೋಧನೆ ಹೇಳಿದೆ.
ಮೊನೊಕ್ಲೋನಲ್ ಆಂಟಿಬಾಡಿ ಥೆರಪಿಯು ಡೆಲ್ಟಾ ರೂಪಾಂತರದ ಸೋಂಕಿಗೆ ಒಳಗಾದ ಹೆಚ್ಚಿನ ಅಪಾಯದ ವ್ಯಕ್ತಿಗಳಲ್ಲಿ ತೀವ್ರ ರೋಗ ಮತ್ತು ಸಾವನ್ನು ಶೇ 100ರಷ್ಟು ಕಡಿಮೆ ಮಾಡುತ್ತದೆ ಎಂದು ಹೈದರಾಬಾದ್ ಮೂಲದ ಎಐಜಿ ಆಸ್ಪತ್ರೆಗಳು, ಸಿಎಸ್‌ಐಆರ್ - ಸೆಂಟರ್ ಫಾರ್ ಸೆಲ್ಯೂಲಾರ್ ಅಂಡ್ ಮಾಲೆಕ್ಯೂಲರ್ ಬಯಾಲಜಿ ಹಾಗೂ ಇತರ ಸಂಸ್ಥೆಗಳು ಸೇರಿ ನಡೆಸಿದ ಅಧ್ಯಯನವು ಹೇಳಿದೆ.
ಡೆಲ್ಪಾ ರೂಪಾಂತರದ ವಿರುದ್ಧ ಡ್ರಗ್ ಕಾಕ್‌ಟೈಲ್‌ನ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಜಾಗತಿಕವಾಗಿ ನಡೆಸಿದ ಮೊದಲ ವಿಶ್ಲೇಷಣೆಯ ಅಧ್ಯಯನವಿದು ಎಂದು ಸಂಶೋಧಕರು ಹೇಳಿದ್ದಾರೆ.
ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ.ನಾಗೇಶ್ವರ ರೆಡ್ಡಿ, ತಮ್ಮ ಅಧ್ಯಯನದ ಫಲಿತಾಂಶಗಳನ್ನು 'ವಿಸ್ಮಯಕಾರಿ' ಎಂದು ಬಣ್ಣಿಸಿದ್ದಾರೆ. 'ವಿಶೇಷವಾಗಿ ಗರ್ಭಿಣಿಯರು, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯ ಮತ್ತು ದೀರ್ಘಕಾಲದ ಅನಾರೋಗ್ಯ ಅನುಭವಿಸುತ್ತಿರುವ ವಯೋವೃದ್ಧರಂತಹ ಹೆಚ್ಚಿನ ಅಪಾಯದ ವ್ಯಕ್ತಿಗಳಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ಸಾರ್ವಜನಿಕ ಆರೋಗ್ಯ ನೀತಿಯನ್ನು ಮರುರೂಪಿಸುವ ಸಾಮರ್ಥ್ಯ ಈ ಅಧ್ಯಯನದ ಫಲಿತಾಂಶದಲ್ಲಿದೆ' ಎಂದು ಅವರು ಹೇಳಿದ್ದಾರೆ.
'ಸಮಯಕ್ಕೆ ಸರಿಯಾಗಿ ಮೊನೊಕ್ಲೋನಲ್ ಥೆರಪಿಯು ರೋಗದ ತೀವ್ರತೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ ಎಂಬುದನ್ನು ನಾವು ನಮ್ಮ ಸಂಶೋಧನೆಯಲ್ಲಿ ಸ್ಪಷ್ಟವಾಗಿ ನಿರೂಪಿಸಿದ್ದೇವೆ' ಎಂದು ಡಾ. ರೆಡ್ಡಿ ಹೇಳಿದರು.
ಸಾರ್ಸ್- ಕೋವಿಡ್ -2 ವೈರಸ್ ರೂಪಾಂತರಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಅತ್ಯಂತ ಅಪಾಯಕಾರಿಯಾಗಿ ವಿಕಸನಗೊಂಡಿದೆ. ಈ ಸೋಂಕಿನ ಹೆಚ್ಚಿನ ಪ್ರಸರಣವು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ವಿನಾಶವನ್ನೇ ಉಂಟು ಮಾಡಿದೆ.