ಒಮ್ಮೆಯೂ ಅಧಿಕಾರಕ್ಕೆ ಏರಲು ಸಾಧ್ಯವಾಗಿಲ್ಲದ ದಕ್ಷಿಣದ ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ವಿಶೇಷ ಗಮನ ನೀಡಲು ಕಾರ್ಯಕಾರಿಣಿ ನಿರ್ಧರಿಸಿದೆ. ಹಾಗೆಯೇ ದೇಶದ ಪೂರ್ವ ಭಾಗದ ರಾಜ್ಯ ಒಡಿಶಾದತ್ತಲೂ ಹೆಚ್ಚು ಗಮನ ಹರಿಸಲು ತೀರ್ಮಾನಿಸಲಾಗಿದೆ.
ವಿಧಾನಸಭೆಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ದುಪ್ಪಟ್ಟುಗೊಳಿಸಬೇಕು. ಬಿಜೆಪಿ ರಾಜಕೀಯ ಪರ್ಯಾಯವಾಗಿ ಬೆಳೆದಿಲ್ಲದ ರಾಜ್ಯಗಳಲ್ಲಿಯೂ ಹೆಚ್ಚು ಕೆಲಸ ಮಾಡಬೇಕು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಖಂಡರಿಗೆ ಕರೆ ಕೊಟ್ಟರು.
ದೇಶದಲ್ಲಿರುವ 10.40 ಲಕ್ಷ ಮತಗಟ್ಟೆಗಳಿಗೂ ಮತಗಟ್ಟೆ ಸಮಿತಿ ರಚಿಸುವಂತೆ ನಡ್ಡಾ ಅವರು ಮುಖಂಡರಿಗೆ ನಿರ್ದೇಶನ ನೀಡಿದ್ದಾರೆ ಎಂದು ಕಾರ್ಯಕಾರಿಣಿಯ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು. ಶೇ 85ರಷ್ಟು ಮತಗಟ್ಟೆಗಳಿಗೆ ಮತಗಟ್ಟೆ ಸಮಿತಿ ಈಗಾಗಲೇ ಇದೆ. ಉಳಿದ ಶೇ 15ರಷ್ಟು ಮತಗಟ್ಟೆಗಳ ಸಮಿತಿಯನ್ನು ಈ ಡಿಸೆಂಬರ್ 25ರೊಳಗೆ ರಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಪಕ್ಷವು ದೇಶದ ಮೂಲೆಮೂಲೆಗೂ ತಲುಪಬೇಕು. ಅದಕ್ಕಾಗಿ ಪ್ರತಿ ಮತಗಟ್ಟೆಯಲ್ಲಿಯೂ ಮತದಾರರ ಪಟ್ಟಿಯ ಪುಟ ಸಮಿತಿಗಳನ್ನು ಮುಂದಿನ ಏಪ್ರಿಲ್ 6ರ ಒಳಗೆ ರಚಿಸಬೇಕು. ಪ್ರಧಾನಿಯವರ 'ಮನದ ಮಾತು' ಬಾನುಲಿ ಭಾಷಣವನ್ನು ಸಾರ್ವಜನಿಕವಾಗಿ ಆಲಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದೂ ನಡ್ಡಾ ಕರೆ ಕೊಟ್ಟಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ನಾಯಕರು ಪಕ್ಷ ತೊರೆಯುತ್ತಿರುವ ವಿಚಾರವೂ ಕಾರ್ಯಕಾರಿಣಿಯಲ್ಲಿ ಉಲ್ಲೇಖವಾಗಿದೆ. 'ಪಕ್ಷವು ರಾಜ್ಯ ಘಟಕದ ಜತೆಗೆ ಬಂಡೆಯಂತೆ ನಿಲ್ಲಲಿದೆ. ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಶಕ್ತಿಗಳಿಗೆ ತಕ್ಕ ಉತ್ತರ ನೀಡಲಾಗುವುದು. ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಹೋರಾಡಲಾಗುವುದು' ಎಂದು ನಡ್ಡಾ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಬಿಜೆಪಿ ಕಷ್ಟಕರ ಸ್ಥಿತಿಯಲ್ಲಿದೆ. ಹಾಗಾಗಿಯೇ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಖ್ ಸಮುದಾಯದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ನಡ್ಡಾ ಅವರು ವಿವರ ನೀಡಿದ್ದಾರೆ.
ಉತ್ತರ ಪ್ರದೇಶ, ಮಣಿಪುರ, ಗೋವಾ, ಉತ್ತರಾಖಂಡ ಮುಖ್ಯಮಂತ್ರಿಗಳು, ಬಿಜೆಪಿಯ ಪಂಜಾಬ್ ಘಟಕದ ಅಧ್ಯಕ್ಷರು ಚುನಾವಣಾ ಸನ್ನದ್ಧತೆ ಬಗ್ಗೆ ವಿವರ ನೀಡಿದರು.
ಪಕ್ಷ ಮತ್ತು ಜನರ ನಡುವೆ ನಂಬುಗೆಯ ಸೇತುವೆಯಂತೆ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆದ ಕಾರ್ಯಕಾರಿಣಿಯಲ್ಲಿ ಕರೆ ಕೊಟ್ಟರು.