ಕೊಚ್ಚಿ: ಮಿಸ್ ಸೌತ್ ಇಂಡಿಯಾ ಮತ್ತು ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಮತ್ತು ಮಾಜಿ ಮಿಸ್ ಕೇರಳ ರನ್ನರ್ ಆಪ್ ಅಂಜನಾ ಶಹಜಾನ್ ಇಂದು ಮುಂಜಾನೆ ಕೊಚ್ಚಿಯ ವೈಟ್ಟಿಲದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆನ್ಸಿ ತಿರುವನಂತಪುರಂ ಜಿಲ್ಲೆಯ ಅಲಂಕೋಡ್ ನಿವಾಸಿ, ಅಂಜನಾ ತ್ರಿಶೂರ್ ನವರು. ವೈಟಿಲ್ಲಾ ಮತ್ತು ಪಲರಿವಟ್ಟಂ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿಡೇ ಇನ್ ಹೋಟೆಲ್ ಬಳಿ ಮಧ್ಯರಾತ್ರಿ 1.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಟಿಲ ಕಡೆಯಿಂದ ಬರುತ್ತಿದ್ದ ಆನ್ಸಿ ಮತ್ತು ಅಂಜನಾ ಅವರಿದ್ದ ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಮರವೊಂದಕ್ಕೆ ಗುದಿದ್ದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆನ್ಸಿ ಮತ್ತು ಅಂಜನಾ ಅವರೊಂದಿಗೆ ಇತರ ಇಬ್ಬರು ಇದ್ದರು ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಆನ್ಸಿ ಮತ್ತು ಅಂಜನಾ ಅವರನ್ನು ಎರ್ನಾಕುಳಂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನ್ಸಿ ಮತ್ತು ಅಂಜನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೊಲೀಸರು ಸಿಸಿಟಿವಿ ಕ್ಯಾಮರಾ ನಡೆಸಿದಾಗ, ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು, ನಿಯಂತ್ರಣ ಕಳೆದುಕೊಂಡು ಮುಂದೆ ಇದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಅಫಘಾತ ಸಂಭವಿಸಿರಬಹುದು ಎನ್ನಲಾಗಿದೆ.
ಆನ್ಸಿ 2019ರಲ್ಲಿ ಮಿಸ್ ಕೇರಳ ಕಿರೀಟ ತೊಟ್ಟಿದ್ದರು, ಇದೇ ಕಾರ್ಯಕ್ರಮದಲ್ಲಿ ಅಂಜನಾ ರನ್ನರ್ ಆಪ್ ಆಗಿದ್ದರು. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಆನ್ಸಿ ಮಿಸ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.